ಹಿಜಾಬ್‌–ಕೇಸರಿ ಶಾಲು ವಿವಾದ: ಭಾರತ ಇಸ್ಲಾಮೀಕರಣಗೊಳಿಸುವ ಹುನ್ನಾರ

ಬೆಂಗಳೂರು: ‘ಹಿಜಾಬ್, ಗಡ್ಡ ಅಥವಾ ಬುರ್ಖಾದ ವಿಚಾರಗಳ ತಗಾದೆಯನ್ನು ನಮ್ಮ ನ್ಯಾಯಾಲಯಗಳು ಎಷ್ಟು ವರ್ಷಗಳವರೆಗೆ ವಿಚಾರಣೆ ನಡೆಸುತ್ತಿರಬೇಕು’ ಎಂದು ಸುಪ್ರೀಂ ಕೋರ್ಟ್‌ ವಕೀಲ ಸುಭಾಷ್‌ ಝಾ ಅವರು ಹೈಕೋರ್ಟ್‌ ಅನ್ನು ಪ್ರಶ್ನಿಸಿದರು. 

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಂಬೈನ ವಕೀಲ ಘನಶ್ಯಾಮ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ಪರವಾಗಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಮೂವರು ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ವಾದ ಮಂಡಿಸಿದ ಅವರು, ‘ಹಿಜಾಬ್‌, ಗಡ್ಡ, ಬುರ್ಖಾ ಸಮಸ್ಯೆ ಇವತ್ತು ನಿನ್ನೆಯದಾಗಿ ಉಳಿದಿಲ್ಲ. ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಈ ರೀತಿಯ ಅರ್ಜಿಗಳು ಆಗಾಗ್ಗೆ ಒಂದಿಲ್ಲೊಂದು ತಕರಾರು ಮೂಲಕ ದಾಖಲಾಗುತ್ತಲೇ ಇರುತ್ತವೆ. ಇಂತಹ ಅರ್ಜಿಗಳ ವಿಚಾರಣೆ ನಡೆಸುವುದರಿಂದ ಕೋರ್ಟುಗಳ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಈ ರೀತಿಯ ಅರ್ಜಿಗಳನ್ನು ದಾಖಲಿಸುತ್ತಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವೇ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಅರ್ಜಿದಾರ ಹುಡುಗಿಯರು ಮೊದಲು ಹಿಜಾಬ್ ಧರಿಸಿರಲಿಲ್ಲ ಎಂಬುದನ್ನು ದಾಖಲೆಯಲ್ಲಿರುವ ಚಿತ್ರಗಳು ಸಾಬೀತುಪಡಿಸುತ್ತಿವೆ. ಆದರೆ, ಈಗ ಏಕಾಏಕಿ ಒಂದರ ಹಿಂದೆ ಒಂದರಂತೆ ಅವರು ರಿಟ್‌ ಅರ್ಜಿಗಳನ್ನು ಸಲ್ಲಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಪ್ರಕರಣಗಳಲ್ಲಿ ದುಬಾರಿ ಶುಲ್ಕ ಪಡೆಯುವ ಹಿರಿಯ ವಕೀಲರು ವಾದ ಮಂಡಿಸುತ್ತಿದ್ದಾರೆ. ಇದೆಲ್ಲಾ ಈ ಬಡ ಹುಡುಗಿಯರಿಗೆ ಹೇಗೆ ಸಾಧ್ಯವಾಗಿದೆ’ ಎಂದು ಝಾ ಪ್ರಶ್ನಿಸಿದರು.

‘ಧರ್ಮದ ಸಿದ್ಧಾಂತಗಳನ್ನು ಅಕ್ಷರಶಃ ಅನುಸರಿಸಲು ಸಾಧ್ಯವಿಲ್ಲ. 1,400 ವರ್ಷಗಳ ಹಿಂದೆ ಯಾವ ರೀತಿಯ ಆಚರಣೆ ಇತ್ತು ಎಂಬುದನ್ನು 2022 ರಲ್ಲೂ ಅನ್ವಯಿಸಬೇಕು ಎನ್ನುವುದು ಕಾರ್ಯಸಾಧುವಲ್ಲ. ಇವತ್ತು ಇಸ್ಲಾಂ ಜನ್ಮತಳೆದಿರುವ ಸೌದಿ ಅರೇಬಿಯಾದ ನೆಲದಲ್ಲಿ ಅಲ್ಲಿನ ರಾಜಕುಮಾರನೇ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನೆಲ್ಲಾ ಇಲ್ಲಿನವರು ನೆನಪಿಡಬೇಕು. ಮೊದಲು ದೇಶದ ಕಾನೂನನ್ನು ಅನುಸರಿಸಬೇಕು‘ ಎಂದು ಪ್ರತಿಪಾದಿಸಿದರು.

ವಿದೇಶಿ ದುಡ್ಡು: ‘ಭಾರತವನ್ನು ಇಸ್ಲಾಮೀಕರಣಗೊಳಿಸುವ ಪ್ರಯತ್ನಕ್ಕೆ ಸೌದಿ ಅರೇಬಿಯಾದಿಂದ ದೊಡ್ಡ ಪ್ರಮಾಣದ ಹಣಸಹಾಯ ಇಲ್ಲಿನ ವಿವಿಧ ಮುಸ್ಲಿಂ ಸಂಘಟನೆಗಳಿಗೆ ಹರಿದು ಬರುತ್ತಿದೆ. ಪಿಎಫ್‌ಐ, ಎಸ್‌ಐಒ, ಜಮಾತ್ ಇ ಇಸ್ಲಾಮಿ ಸಂಸ್ಥೆಗಳು ಸೌದಿ ವಿಶ್ವವಿದ್ಯಾಲಯಗಳಿಂದ ಧನಸಹಾಯ ಪಡೆಯುತ್ತಿವೆ. ಈ ಸಂಘಟನೆ ಗಳನ್ನು ಸರ್ಕಾರ ನಿಷೇಧ ಮಾಡಿದರೆ ಮರುದಿನವೇ ಅವು ಮತ್ತೊಂದು ಹೆಸರಿನಲ್ಲಿ ಜೀವಪಡೆದು ತಮ್ಮ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿವೆ’ ಎಂದರು.

‘ಕರ್ನಾಟಕದಲ್ಲಿ ಹುಟ್ಟಿರುವ ಈ ವಿವಾದ ಈಗ ಇಡೀ ದೇಶಾದ್ಯಂತ ಹರಡಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಆಂದೋಲನವನ್ನು ಇವರೆಲ್ಲಾ ರಾತ್ರೋರಾತ್ರಿ ಆಯೋಜಿಸಲು ಸಾಧ್ಯವಿಲ್ಲ. ಈ ಸಂಘರ್ಷದಲ್ಲಿ ಶಿವಮೊಗ್ಗದಲ್ಲಿನ ಹರ್ಷ ಎಂಬ ಯುವಕನ ಹತ್ಯೆಯಾಗಿದೆ. ಇದರ ಹಿಂದೆ ಸಿಎಫ್‌ಐ ಸಂಘಟನೆಯಿದೆ. ಹಾಗಾಗಿ, ಇಂತಹ ಮುಸ್ಲಿಂ ಸಂಘಟನೆಗಳ ವಿರುದ್ಧ ಸಿಬಿಐ ಅಥವಾ ಎನ್‌ಐಎ ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಮ ಆರೋಪಕ್ಕೆ ಏನಾದರೂ ಸಾಕ್ಷ್ಯಗಳನ್ನು ಇಲ್ಲಿ ಸಾದರಪಡಿಸಿದ್ದೀರಾ’ ಎಂದು ಪ್ರಶ್ನಿಸಿತು. ಇದಕ್ಕೆ ಝಾ,‘ಆಂಧ್ರದ ವಿನೋದ್ ಅಣ್ಣಾ ಎಂಬಾತ ವಿಡಿಯೊಗಳನ್ನು ಬಿಡುಗಡೆ ಮಾಡಿದ್ದಾನೆ. ಜೊತೆಗೆ ಅಯ್ಯರ್ ಎಂಬವರು ಪಾಪಿ ಸಂಘಟನೆಗಳ ವಿವರ ನೀಡಿದ್ದಾರೆ. ಒಂದು ಸಂಘಟನೆಯನ್ನು ನಿಷೇಧಿಸಿದರೆ, ಅವು ಇನ್ನೊಂದು ಹೆಸರಿನಲ್ಲಿ ಉದಯವಾಗುತ್ತವೆ’ ಎಂದರು. ಅರ್ಜಿದಾರರ ಮನವಿಯನ್ನು ಪರಿಗಣಿಸುವುದಾಗಿ ನ್ಯಾಯಪೀಠ ತಿಳಿಸಿತು.

Leave a Reply

Your email address will not be published. Required fields are marked *

error: Content is protected !!