ಅನ್ ಲಾಕ್ -3 ಪ್ರಕಟ: ರಾತ್ರಿ ಕರ್ಫ್ಯೂ ಇಲ್ಲ, ಆಗಸ್ಟ್ 31ರವರೆಗೆ ಶಾಲಾ ಕಾಲೇಜ್ ಗೆ ರಜೆ
ನವದೆಹಲಿ: ಕೋವಿಡ್ 19 ಸೋಂಕಿನ ಕಾರಣದಿಂದ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್ ಡೌನ್ ನಿಯಮಾವಳಿಗಳನ್ನು ಮತ್ತಷ್ಟು ಸಡಿಲಿಸಿ ಅನ್ ಲಾಕ್ -3 ಯ ನಿಯಮಾವಳಿಗಳನ್ನು ಕೇಂದ್ರ ಗೃಹ ಇಲಾಖೆ ಇಂದು ಪ್ರಕಟಿಸಿದೆ.
ದೇಶದಲ್ಲಿನ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಇದರ ಪ್ರಕಾರ ಯೋಗ ತರಬೇತಿ ಕೇಂದ್ರಗಳನ್ನು ಹಾಗೂ ಜಿಮ್ ಗಳನ್ನು ಆಗಸ್ಟ್ ತಿಂಗಳಿನಿಂದ ತೆರೆಯಲು ಅನುಮತಿ ನೀಡಲಾಗಿದೆ. ಮತ್ತು ಇದುವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ನಿರ್ಬಂಧವನ್ನು ಆಗಸ್ಟ್ 1ರಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ.
ಯೋಗ ಕೇಂದ್ರಗಳು ಹಾಗೂ ಜಿಮ್ ಗಳನ್ನು ಆಗಸ್ಟ್ 5ರಿಂದ ತೆರೆಯಲು ಅನುಮತಿ ನೀಡಲಾಗಿದೆ. ಮತ್ತು ಇವುಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಸದ್ಯದಲ್ಲೇ ಸ್ಟ್ಯಾಂಡರ್ಡ್ ಅಪರೇಷನ್ ಪ್ರೊಸೀಜರ್ ಪ್ರಕಟಿಸಲಿದೆ.
ಸೂಕ್ತ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಹಾಗೂ ಇನ್ನಿತರ ಆರೋಗ್ಯ ನಿಯಮಾಳಿಗಳನ್ನು ಪಾಲಿಸಿಕೊಂಡು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ಆಚರಣೆಯನ್ನು ನಡೆಸಲು ಅನ್ ಲಾಕ್ 3.0 ನಿಯಮಾವಳಿಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಶಾಲಾ ಕಾಲೇಜುಗಳನ್ನು ಆಗಸ್ಟ್ 31ರವರೆಗೆ ತೆರೆಯದೇ ಇರಲು ಕೇಂದ್ರ ಸರಕಾರ ನಿರ್ಧರಿಸಿದೆ.
ವಂದೇ ಭಾರತ್ ವಿಷನ್ ನಡಿಯಲ್ಲಿ ಕಾರ್ಯಾಚರಿಸುವ ವಿಮಾನಗಳಿಗೆ ಮಾತ್ರವೇ ಅಂತಾರಾಷ್ಟ್ರೀಯ ಸಂಚಾರಕ್ಕೆ ಸದ್ಯಕ್ಕೆ ಅನುಮತಿ ನೀಡಲಾಗಿದೆ.
ಇನ್ನು ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿದಂತೆ ದೇಶದ ಉಳಿದೆಲ್ಲಾ ಕಡೆಗಳಲ್ಲಿ ಈ ಕೆಳಗಿನ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಅನ್ ಲಾಕ್ 3.0 ನಿಯಮಾವಳಿಗಳಲ್ಲಿ ಅನುಮತಿ ನೀಡಲಾಗಿದೆ.
– ಮೆಟ್ರೋ ರೈಲು ಸೇವೆಗಳಿಗೆ ಅನುಮತಿ ಇಲ್ಲ.
– ಚಿತ್ರ ಮಂದಿರಗಳು, ಸ್ವಿಮ್ಮಿಂಗ್ ಪೂಲ್ಸ್, ಮನರಂಜನಾ ಪಾರ್ಕ್ ಗಳು, ಥಿಯೇಟರ್ ಗಳು, ಬಾರ್ ಗಳು, ಆಡಿಟೋರಿಯಂಗಳು, ಸಭಾಂಗಣಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ.