| ಉಡುಪಿ ಫೆ.25(ಉಡುಪಿ ಟೈಮ್ಸ್ ವರದಿ): ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಸಂಸ್ಥೆಯ ಪ್ರಾಂತ್ಯ 6ರ ಪ್ರಾಂತೀಯ ಸಮ್ಮೇಳನವು ಫೆ. 27 ರಂದು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಅರುಣಾ ಸುದರ್ಶನ ಹೆಗ್ಡೆ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಲಯನ್ಸ್ ಅಧ್ಯಕ್ಷ ಲ. ಸುನಿಲ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮ ದಲ್ಲಿ ಖ್ಯಾತ ವಾಗ್ಮಿ ಕಲ್ಲಡ್ಕ ವಿಠಲ ನಾಯಕ ಹಾಗೂ ಚಿತ್ರ ನಟ ರೂಪೇಶ್ ಶೆಟ್ಟಿ ಮತ್ತು ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು,ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಲ. ವಿಶ್ವನಾಥ ಶೆಟ್ಟಿ, ಪ್ರಥಮ ಉಪ ಜಿಲ್ಲಾ ಗವರ್ನರ್ ಲ.ಡಾ.ಎಂ.ಕೆ.ಭಟ್, ನಿಕಟಪೂರ್ವ ಗವರ್ನರ್-ನೀಲಕಂಠ ಎಂ.ಹೆಗಡೆ, ಮಾಜಿ ಜಿಲ್ಲಾ ಗವರ್ನರ್ ಲ.ಡಿ ಶ್ರೀಧರ ಶೇಣವ ಮತ್ತು ಲ.ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಇತರ ಪ್ರಾಂತ್ಯಾಧ್ಯಕ್ಷರು ಮತ್ತು ಹಿರಿಯ ಲಯನ್ಸ್ ನಾಯಕರು ಉಪಸ್ಥಿತರಿರಲಿದ್ದಾರೆ.
ಸಮ್ಮೇಳನದಲ್ಲಿ ವೈಭವದ ಬ್ಯಾನರ್ ಪ್ರದರ್ಶನ, ವಿವಿಧ ಮನರಂಜನೆಯ ಕಾರ್ಯಕ್ರಮಗಳು ನಡೆಯಲಿದೆ. ಅರ್ಹ ಫಲಾನುಭವಿಗಳಿಗೆ ಗಾಲಿ ಕುರ್ಚಿ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕೆ ಸಹಾಯ ಮೊದಲಾದ ಸೇವಾ ಚಟುವಟಿಕೆಗಳು ನಡೆಯಲಿದೆ. ಈ ಸಮ್ಮೇಳನದಲ್ಲಿ ಜಿಲ್ಲೆಯಾದ್ಯಂತ 700ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು ಆಹ್ವಾನಿತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಬೆಳಿಗ್ಗೆ 9:30 ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ಕೋಟದ ಲಯನ್ಸ್ ಕಣ್ಣಿನ ಆಸ್ಪತ್ರೆ, ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ ಅಂಡ್ ಚಾರಿಟೀಸ್ ಕೋಟ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ನಿವಾರಣಾ ವಿಭಾಗ, ಲಯನ್ಸ್ ಮತ್ತು ಲಿಯೋ ಕ್ಲಬ್ ಕೋಟ-ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ.
ಲಯನ್ಸ್ ಜಿಲ್ಲಾ ಗವರ್ನರ್ ಈ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಪರಿಸರದ ಜನತೆಗೆ ಉಚಿತ ತಪಾಸಣೆ, ಹೊರ ರೋಗ ಚಿಕಿತ್ಸೆ ಮತ್ತು ರಿಯಾಯತಿ ದರದಲ್ಲಿ ಲೇಸರ್ ಚಿಕಿತ್ಸೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಾಂತ್ಯ 6 ರ ಪ್ರಾಂತ್ಯಾಧ್ಯಕ್ಷ ಲ.ಎಚ್ ಸುದರ್ಶನ ಹೆಗ್ಡೆ, ಸಮ್ಮೇಳನಾ ಸಮಿತಿ ಕಾರ್ಯದರ್ಶಿ ಲ. ಡಾ.ಜಗದೀಶ ಹೊಳ್ಳ, ಖಜಾಂಚಿ ಲ.ರತ್ನಾಕರ ಶೆಟ್ಟಿ, ಸತೀಶ್ ಹೆಗ್ಡೆ, ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು. | |