ಮಂಗಳೂರು: 1,064 ಸಾಮಾಜಿಕ ಜಾಲತಾಣಗಳ ಖಾತೆ ಮೇಲೆ ನಿಗಾ ಇಟ್ಟ ಪೊಲೀಸ್!
ಮಂಗಳೂರು, ಫೆ 25: ಸುಳ್ಳು ಸುದ್ದಿ ಹರಡಿ ಸಾಮಾಜಿಕ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಕಳೆದೊಂದು ತಿಂಗಳಿನಿಂದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್ ಮತ್ತು ಅದರಲ್ಲಿರುವ ಇತರ 7 ಸಿಬ್ಬಂದಿಗಳ ತಂಡ ತೀವ್ರ ನಿಗಾ ವಹಿಸಿದೆ.
ಈವರೆಗೆ 1064 ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಟ್ವಿಟರ್, ಟ್ರೋಲ್ ಖಾತೆಗಳ ಮೇಲೆ ಹದ್ದಿನ ಕಣ್ಣಿರಿಸ ಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಇಲಾಖೆಯ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್, ಜನವರಿಯಿಂದ ಕಾರ್ಯಾಚರಣೆ ಮಾಡುತ್ತಿದ್ದು ಸಾಮಾಜಿಕ ಜಾಲತಾಣಗಳ ಮೇಲೆ ನಿಕಟ ನಿಗಾ ಇರಿಸಿದೆ. ಡಿಸಿಪಿ ನೇತೃತ್ವದ 7 ಜನರಿರುವ ತಂಡ 2 ತಿಂಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು,1064 ಖಾತೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ.
ಸಾರ್ವಜನಿಕರು ತಮ್ಮ ಖಾತೆ ಟ್ರ್ಯಾಕಿಂಗ್ ಆಗಿರುವ ಬಗ್ಗೆ ಆತಂಕ ಪಡಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ಆಕ್ಷೇಪಾರ್ಹ ಪೋಸ್ಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕಿಡಿಗೇಡಿಗಳ ಖಾತೆಗಳ ಮೇಲೆ ಮಾತ್ರ ನಿಗಾ ಇಡಲಾಗಿದೆ . ಸಾಮಾಜಿಕ ಮಾಧ್ಯಮವು ಪ್ರಬಲ ಅಸ್ತ್ರವಾಗಿದೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿ ಆದರೆ ಅದನ್ನು ದುರುಪಯೋಗಪಡಿಸಬೇಡಿ” ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಟ್ರೋಲ್ ಕಿಂಗ್ 193 ಇನ್‌ಸ್ಟ್ರಾ ಗ್ರಾಂ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಕುರಿತು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮೇರೆಗೆ ಪೇಜ್‌ನ ಅಡ್ಮಿನ್, ಕೊಣಾಜೆಯ ನಿವಾಸಿ ಎಸ್‌ಎಸ್‌ಎಲ್‌ಸಿ ಫೇಲ್ ಆಗಿರುವ ಅಪ್ರಾಪ್ತ ವಯಸ್ಕನನ್ನು ಯುವಕನನ್ನು ವಶಕ್ಕೆ ಪಡೆಯಲಾಗಿದೆ. ದೇವಸ್ಥಾನಗಳ ಬಗ್ಗೆ ಮತ್ತು ಇನ್ನೂ ಅನೇಕ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಈ ಪೇಜ್ ಹೊಂದಿದೆ.ಆರೋಪಿಯ ಬಳಿ ಆಕ್ಷೇಪಾರ್ಹ ಪೋಸ್ಟ್ ಮಾರ್ಫ್ ಮಾಡಲು, ಎಡಿಟ್ ಮಾಡಲು ಬೇಕಾದ ಗ್ಯಾಜೆಟ್ ಗಳು, ಸಾಫ್ಟ್ ವೇರ್ ಗಳಿದ್ದವು. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲನ್ಯಾಯ ಮಂಡಳಿಗೆ ಹಾಜರುಪಡಿಸ ಲಾಗುವುದು. ಈತ ಬೆಂಗಳೂರಿನಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಯಾರಿಂದಲಾದರೂ ಬೆಂಬಲ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ವಿಚಾರಣೆಯ ವೇಳೆ ಈತ ಈ ಪೇಜ್‌ನಲ್ಲಿ ತಾನೇ ಈ ಪೋಸ್ಟ್‌ಗಳನ್ನು ಹಾಕಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಆರೋಪಿಗಳ ಹಿಂದೆ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯ ಬೆಂಬಲವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಸಂಬಂಧಿಸಿದ ಸಂದೇಶಗಳು, ವೀಡಿಯೊಗಳು, ಚಾಟ್‌ಗಳನ್ನು ಪೇಜ್ ನಲ್ಲಿದ್ದು ಆದರೆ ಆರೋಪಿಗೆ ಈ ಸಂಘಟನೆ, ರಾಜಕೀಯ ಪಕ್ಷದ ಬೆಂಬಲವಿದೆ ಎಂದು ಹೇಳಲು ಸಾಧ್ಯವಿಲ್ಲ. ಕಾಮೆಂಟ್, ಲೈಕ್ ಮತ್ತು ಶೇರ್ ಮಾಡುವವರು ಸಮಾನ ಅಪರಾಧಿಗಳು, ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ. ಆ್ಯಂಡ್ರಾಯ್ಡ್ ಫೋನ್, ಆಪ್ ಇನ್‌ಸ್ಟಾಲ್, ಎಡಿಟ್, ಮಾರ್ಫ್ ಹೊಂದಿರುವ ಆರೋಪಿಯನ್ನು ಅಮಾಯಕ ಎಂದು ಹೇಳುವುದು ತಪ್ಪು. ಇಂದಿಗೂ ಅನೇಕ ಜನ ಸಾಮಾನ್ಯರಿಗೆ ಸರ್ಕಾರಿ ಉದ್ಯೋಗ, ಆನ್‌ಲೈನ್ ಬ್ಯಾಂಕಿಂಗ್‌ಗೆ ಅರ್ಜಿ ಸಲ್ಲಿಸಲು ತಿಳಿದಿಲ್ಲ. ಆಕ್ಷೇಪಾರ್ಹ ಪೋಸ್ಟ್‌ನಲ್ಲಿ ಆರೋಪಿಯ ಉದ್ದೇಶಗಳು ಸ್ಪಷ್ಟವಾಗಿವೆ ಎಂದು ಹೇಳಿದ್ದಾರೆ.