ಹಿಜಾಬ್ ವಿವಾದ: ವಿಚಾರಣೆ ಅಂತ್ಯ- ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಶಾಲಾ ಕಾಲೇಜುಗಳ ಕ್ಯಾಂಪಸ್ ಗಳಲ್ಲಿ ಹಿಜಾಬ್ ನಿಷೇಧಿಸಿದ್ದ ಫೆ.05 ರ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗಳನ್ನು ಹೈಕೋರ್ಟ್ ಫೆ.25 ರಂದು ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. 

ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್ ದೀಕ್ಷಿತ್, ನ್ಯಾ.ಜೆಎಂ ಖಾಜಿ ಅವರಿದ್ದ ಪೂರ್ಣ ಪೀಠ ಫೆ.10 ರಂದು ಅರ್ಜಿ ವಿಚಾರಣೆ ಪ್ರಾರಂಭಿಸಿತ್ತು. ಎರಡು ವಾರಗಳ ಕಾಲ ಸತತ ವಿಚಾರಣೆ ನಡೆದಿದೆ. ಸರ್ಕಾರಿ ಆದೇಶವನ್ನು ಉಡುಪಿಯ ಸರ್ಕಾರಿ ಪದವಿಪೂರ್ವ ವಿದ್ಯಾರ್ಥಿನಿಯರ ಕಾಲೇಜು ಹಾಗೂ ಮತ್ತಿತರರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಪರ್ದಾ ಅಥವಾ ಬುರ್ಖಾ ಕಡ್ದಾಯ ಧಾರ್ಮಿಕ ಆಚರಣೆಯಾಗದೇ ಇರಬಹುದು ಆದರೆ ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ ಇಸ್ಲಾಮ್ ನ ಕಡ್ಡಾಯ ಭಾಗವಾಗಿದೆ. ಕೇರಳ ಹಾಗೂ ಮದ್ರಾಸ್ ಹೈಕೋರ್ಟ್ ಗಳು ಇಸ್ಲಾಮಿಕ್ ಗ್ರಂಥಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬಂದಿವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. 

ಪ್ರತಿವಾದ ಮಂಡಿಸಿರುವ ಸರ್ಕಾರಿ ಪರ ವಕೀಲರು, ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಹಿಜಾಬ್ ಕೂಡ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಹೇಳಿದ್ದು ಸುಪ್ರೀಂ ಕೋರ್ಟ್ ನ ಹಲವು ತೀರ್ಪು ಗಳನ್ನು ಉಲ್ಲೇಖಿಸಿದೆ. ಶಿರೂರು ಮಠದ ಪ್ರಕರಣದಿಂದ ಮೊದಲುಗೊಂಡು ಶಬರಿಮಲೆ ಪ್ರಕರಣಗಳವರೆಗೆ ತಮ್ಮ ವಾದಗಳ ಸಮರ್ಥನೆಗೆ  ಉಲ್ಲೇಖಗಳನ್ನು ನೀಡುತ್ತಾ, ಹಿಜಾಬ್ ಸಂವಿಧಾನದ ಆರ್ಟಿಕಲ್ 25 ರ ಅಡಿಯಲ್ಲಿ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ ನಾವಡಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!