ಪತ್ರಿಕೋದ್ಯಮ, ಇಂಗ್ಲಿಷ್‌, ಮನಃಶಾಸ್ತ್ರ ಓದಿದವರು ಶಿಕ್ಷಕರಾಗುವಂತಿಲ್ಲ!

ಉಡುಪಿ ಫೆ.25: ಪದವಿಯಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್‌ ಜತೆಗೆ ಮನಃಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಓದಿದ ಕಾರಣ ಎಲ್ಲಾ ಅರ್ಹತೆಗಳಿದ್ದರೂ ಸರಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಲು ಸರಕಾರದ ನಿಯಮದಲ್ಲಿ ಅವಕಾಶ ನೀಡದ ಕಾರಣ ಅನೇಕ‌ ಅಭ್ಯರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರದ ಈ ನಿಯಮದಿಂದಾಗ ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ಈ ಹಿಂದೆ ಅಧ್ಯಯನ ಮಾಡಿದ ಅಭ್ಯರ್ಥಿಗಳು ಹೆಚ್ಚಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಮಂಗಳೂರು ವಿ.ವಿ. ವ್ಯಾಪ್ತಿಯ ಹಲವು ಕಾಲೇಜುಗಳಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್‌ ಹಾಗೂ ಮನಃಶಾಸ್ತ್ರ ಐಚ್ಛಿಕ ವಿಷಯವಾಗಿ ಓದಲು ಅವಕಾಶವಿತ್ತು. ಈ ಮೂರು ಐಚ್ಛಿಕ ವಿಷಯದಲ್ಲಿ ಪದವಿ ಪೂರೈಸಿ ಅನಂತರ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ, ಬಿ.ಇಡಿ. ಮಾಡಿ, ಶಿಕ್ಷಕರ ಅರ್ಹತಾ ಪರೀಕ್ಷೆ ಉತ್ತೀರ್ಣ ರಾಗಿದ್ದರೂ ಸರಕಾರಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಂಗಳೂರು ವಿ.ವಿ. ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ‌ ಅವರು,ಇಂಗ್ಲಿಷ್‌, ಪತ್ರಿಕೋದ್ಯಮ, ಮನಃಶಾಸ್ತ್ರ ಕಾಂಬಿನೇಷನ್‌ ಓದಿದ ಅಭ್ಯರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಲಿಖೀತವಾಗಿ ದೂರುಗಳು ಬಂದರೆ ಸರಕಾರಕ್ಕೆ ಕಳುಹಿಸಲಿದ್ದೇವೆ. ಸರಕಾರದ ಹಂತದಲ್ಲಿ ಈ ಬಗ್ಗೆ ನಿಯಮಕ್ಕೆ ತಿದ್ದುಪಡಿ ಆಗಬೇಕು ಎಂದು ತಿಳಿಸಿದ್ದಾರೆ.
ಪ್ರಸ್ತುತ ಸರಕಾರ ಸುಮಾರು 10 ಸಾವಿರ ಪದವೀಧರ ಶಿಕ್ಷಕರ ಹುದ್ದೆ ಭರ್ತಿಗೆ ಮುಂದಾಗಿದೆ. ಆದರೆ ಶಿಕ್ಷಕರ ನೇಮಕಾತಿ ಸಂಬಂಧ ಸರಕಾರ ರೂಪಿಸಿರುವ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಇಂಗ್ಲಿಷ್‌, ಪತ್ರಿಕೋದ್ಯಮ ಹಾಗೂ ಮನಃಶಾಸ್ತ್ರವನ್ನು ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಕಲಿತವರಿಗೆ ಇಂಗ್ಲಿಷ್‌ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವೇ ನೀಡಿಲ್ಲ. 

ಇದರಿಂದಾಗಿ ಈ ವಿಷಯದಲ್ಲಿ ಕಲಿತ ಹಲವು ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿಯಲ್ಲಿ  ನಮಗೂ ಅವಕಾಶ ಕಲ್ಪಿಸಬೇಕು ಎಂದು ಈಗಾಗಲೇ  ಮುಖ್ಯಮಂತ್ರಿ, ಶಿಕ್ಷಣ ಸಚಿವರು, ವಿವಿಧ ಇಲಾಖೆಯ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಸರಕಾರ ಈವರೆಗೂ ಕ್ರಮ ತೆಗೆದುಕೊಂಡಿಲ್ಲ. ಪದವೀಧರ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಪದವಿಯಲ್ಲಿ ಆಂಗ್ಲಭಾಷೆಯ ಜತೆಗೆ ಕನ್ನಡ, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳ, ಕೊಂಕಣಿ, ಸಂಸ್ಕೃತ ಭಾಷಾ ವಿಷಯ, ಇತಿಹಾಸ, ಅರ್ಥಶಾಸ್ತ್ರ ಹಾಗೂ ರಾಜಕೀಯ ಶಾಸ್ತ್ರ ಓದಿದವರಿಗೆ ಅವಕಾಶ ನೀಡಲಾಗಿದೆ. ಇತ್ತೀಚಿನ ವರ್ಷದಲ್ಲಿ ಸಮಾಜಶಾಸ್ತ್ರ ಕಾಂಬಿನೇಷನ್‌ಗೂ ಅವಕಾಶ ನೀಡಲಾಗಿದೆ. ಈಗ ಇಂಗ್ಲಿಷ್‌, ಪತ್ರಿಕೋದ್ಯಮ ಮತ್ತು ಮನಃಶಾಸ್ತ್ರ ಓದಿದ ಅಭ್ಯರ್ಥಿಗಳನ್ನು ಮಾತ್ರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದಲೇ ಹೊರಗೆ ಉಳಿಸಿದ್ದಾರೆ.

ಈ ಅಭ್ಯರ್ಥಿಗಳಿಗೆ ಬಿ.ಇಡಿ. ಮಾಡಲು ಸರಕಾರವೇ ಅನುಮತಿಸಿದೆ. ಸರಕಾರದ ನಿಯಮದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ(ಸಿಎಸಿ) ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲೂ ತೇರ್ಗಡೆಯಾಗಿದ್ದಾರೆ. ಆದರೆ ಶಿಕ್ಷಕರ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಈ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಈ 3 ವಿಷಯಗಳಲ್ಲಿ ಪದವಿ ಪೂರೈಸಿ, ಶಿಕ್ಷಕರಾಗಲು ಎಲ್ಲ ಅರ್ಹತೆ ಇರುವವರಿಗೆ ಪದವೀಧರ ಶಿಕ್ಷಕರ ಹುದ್ದೆಗೆ ಅವಕಾಶ ಕಲ್ಪಿಸುವ ಸಂಬಂಧ ನಿಯಮದಲ್ಲಿ ಸೂಕ್ತ ತಿದ್ದುಪಡಿ ಅಗತ್ಯವಿದೆ. ಅಗತ್ಯ ಮಾರ್ಪಾಟು ಮಾಡಿ ನೂರಾರು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!