| ಭೋಪಾಲ್ ಫೆ.25: ರಷ್ಯಾ ದಾಳಿಯಿಂದಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಅತಂತ್ರರಾಗಿದ್ದು, ಇದನ್ನೇ ಬಳಸಿಕೊಂಡ ವಂಚಕರ ಜಾಲವೊಂದು ಇಂತಹ ವಿದ್ಯಾರ್ಥಿಗಳ ಪೋಷಕರಿಂದ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವುದಾಗಿ ತಿಳಿಸಿ ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಈ ವಿಚಾರವಾಗಿ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನನ್ವಯ ಅಪರಿಚಿತ ವ್ಯಕ್ತಿಯೋರ್ವ ಕರೆಮಾಡಿ ತಾನು ಪ್ರಧಾನಿ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆ ತರುವುದಾಗಿ ಭರವಸೆ ನೀಡಿ 42 ಸಾವಿರ ರೂಪಾಯಿ ವಂಚಿಸಿದ್ದಾಗಿ ತಿಳಿಸಿದ್ದಾರೆ.
ವಿದಿಶಾ ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿರುವ ವೈಶಾಲಿ ವಿಲ್ಸನ್ ಎಂಬವರು ನೀಡಿದ ದೂರಿನಲ್ಲಿ, 42 ಸಾವಿರ ರೂಪಾಯಿಯನ್ನು ತಕ್ಷಣ ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ, ತುರ್ತಾಗಿ ವಿಮಾನ ಟಿಕೆಟ್ ಕಾಯ್ದಿರಿಸಿ, ಫೆ. 27ರಂದೇ ಸುರಕ್ಷಿತವಾಗಿ ಮಗಳನ್ನು ಕರೆ ತರುವುದಾಗಿ ನಂಬಿಸಿದ್ದಾನೆ ಎಂದಿದ್ದಾರೆ. ಹಾಗೂ “ನಾವು ಪ್ರಾಮಾಣಿಕವಾಗಿ 42,000 ರೂಪಾಯಿಗಳನ್ನು ಬುಧವಾರ ಆತ ವಿವರ ನೀಡಿದ ಖಾತೆಗೆ ವರ್ಗಾಯಿಸಿದ್ದೇವೆ. ಆದರೆ ಮಗಳಿಗೆ ಉಕ್ರೇನಿಂದ ಭಾರತಕ್ಕೆ ಬರುವ ಯಾವ ವಿಮಾನ ಟಿಕೆಟ್ ಕೂಡಾ ಸಿಕ್ಕಿಲ್ಲ” ಎಂದು ವಿವರಿಸಿದ್ದಾರೆ.
ಪದೇ ಪದೇ ಕರೆ ಮಾಡಿದ ಬಳಿಕ ವಂಚಕ 5000 ರೂಪಾಯಿ ಹಿಂದಿರುಗಿಸಿದ್ದು, ಇಡೀ ಮೊತ್ತವನ್ನು ವಾಪಾಸು ಕೊಡುವ ಭರವಸೆ ನೀಡಿದ್ದಾನೆ. ಆದರೆ ನಾವು ಆತನನ್ನು ನಂಬುವುದಿಲ್ಲ. ಆದ್ದರಿಂದ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ. ಹಾಗೂ ಮಹಿಳೆಗೆ ಕರೆ ಬಂದ ಸಂಖ್ಯೆಯನ್ನು ಟ್ರೂಕಾಲರ್ ಐಡಿಯಲ್ಲಿ ಪರಿಶೀಲಿಸಿದಾಗ, “ಸೆಂಟ್ರಲ್ ಗವರ್ನ್‍ಮೆಂಟ್ ಆಫ್ ಇಂಡಿಯಾ” ಮತ್ತು “ಪ್ರಿನ್ಸ್ ಜಿ ಪಿಎಂಓ ಸಿವಿಸಿ” ಎಂಬ ಮಾಹಿತಿ ಸಿಕ್ಕಿದೆ ಎಂದು ವರದಿಯಾಗಿದೆ.
ಸದ್ಯ ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ವಿದಿಶಾ ಸಿಟಿ ಕೋತ್ವಾಲಿ ಇನ್‍ಸ್ಪೆಕಟ್ಟರ್ ಅಶುತೋಷ್ ಸಿಂಗ್ ರಜಪೂತ್ ಅವರು, ಪ್ರಕರಣದ ತನಿಖೆ ನಡೆಯುತ್ತಿದ್ದು, ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ. | |