ಉಡುಪಿ: ಉಕ್ರೇನ್‌ನಲ್ಲಿ ಸಿಲುಕಿರುವ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ
ಉಡುಪಿ, ಫೆ 25: ಉಡುಪಿ ಜಿಲ್ಲಾಡಳಿತ ಉಕ್ರೇನ್‌ನಲ್ಲಿ ವಾಸಿಸುತ್ತಿರುವ ಉಡುಪಿ ಜಿಲ್ಲೆಯ ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಉಡುಪಿ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ನಾಲ್ವರು ಉಕ್ರೇನ್‌ನಲ್ಲಿ ನೆಲೆಸಿದ್ದಾರೆ. ನಾಲ್ವರೂ ಕೂಡಾ ವಿದ್ಯಾರ್ಥಿಗಳಾಗಿದ್ದಾರೆ. ಕೆಮ್ಮಣ್ಣು ಮೂಲದ ಗ್ಲೆನ್‌ವಿಲ್ ಫೆರ್ನಾಂಡಿಸ್ ಅವರು ಉಕ್ರೇನ್‌ನಲ್ಲಿರುವ ಟೌನ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾರೆ.
ಕಲ್ಯಾಣಪುರದ ಅನಿಫ್ರೆಡ್ ರಿಡ್ಲಿ ಡಿಸೋಜಾ(20), ಬ್ರಹ್ಮಾವರದ ರೋಹನ್ ಧನಂಜಯ್ ಬಾಗ್ಲಿ (24) ಅವರು ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದಾರೆ. ಮತ್ತು ಮ್ರಾನಾಲ್ (19) ಎಂಬವರು ಕಹೈಮ್ಕಿವ್‌ದಲ್ಲಿರುವ ಇವಾನೊ-ಫ್ರಾನ್ ಕಿವ್ಸ್ಕ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾರೆ. ನಾಲ್ವರೂ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ. ಇವರಲ್ಲದೆ ಉಕ್ರೇನ್‍ನಲ್ಲಿ ಜಿಲ್ಲೆಯ ನಾಗರಿಕರು ಸಿಲುಕಿಕೊಂಡಲ್ಲಿ ಅವರನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೆರವು ಅಗತ್ಯವಿದ್ದರೆ ಆ ಕುರಿತಂತೆ ಜಿಲ್ಲಾಡಳಿತಕ್ಕೆ ಅಗತ್ಯ ಮಾಹಿತಿ ನೀಡಲು ಕೋರಲಾಗಿದೆ.
ಈ ಕುರಿತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಕಂಟ್ರೋಲ್ ರೂಂ ನಂಬರ್- 1077 ಗೆ ಕರೆ ಮಾಡಬಹುದು ಅಥವಾ ಹತ್ತಿರದ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾಧಿಕಾರಿಯವರ ಕಚೇರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.