ಉಕ್ರೇನಿನಲ್ಲಿ ಸಿಲುಕಿರುವ ಉಡುಪಿಯ ಮೂವರು ವೈದ್ಯಕೀಯ ವಿದ್ಯಾರ್ಥಿಗಳು

ಉಡುಪಿ, ಫೆ.24: ರಷ್ಯಾ ಹಾಗೂ ಉಕ್ರೇನಿನ ನಡುವೆ ಉಲ್ಬಣಿಸುತ್ತಿರುವ ಯುದ್ಧದ ವಾತಾವರಣ ದಿನದಿಂದ ದಿನಕ್ಕೆ ಕಾವು ಹೆಚ್ಚುತ್ತಿದ್ದು, ಉಡುಪಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಉಕ್ರೇನಿನ ವೈದ್ಯಕೀಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಅವರೆಲ್ಲರೂ ಸುರಕ್ಷಿತವಾಗಿರುವ ಬಗ್ಗೆ ಮನೆಯವರಿಗೆ ಮಾಹಿತಿ ಬಂದಿದೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ.ಧನಂಜಯ ಅವರ ಪುತ್ರ ರೋಹನ್ ಉಕ್ರೇನ್‌ನ ಕಾರ್ಕೀವ್‌ನಲ್ಲಿರುವ ನೇಷನಲ್ ಮೆಡಿಕಲ್ ಯುನಿರ್ವಸಿಟಿಯಲ್ಲಿ ಐದನೇ ಹಾಗೂ ಅಂತಿಮ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಮುಂದಿನ ಮೇ ತಿಂಗಳ ವೇಳೆ ಅವರ ಕೋರ್ಸ್ ಮುಗಿಯಲಿತ್ತು. ಇವರೊಂದಿಗೆ ಕಾರ್ಕಳ ಹಾಗೂ ಹಿರಿಯಡ್ಕ ಮೂಲದ ಪುಣೆಯ ಇಬ್ಬರು ಸಹ ಇದೇ ಮೆಡಿಕಲ್ ಕಾಲೇಜಿನಲಿ ಕಲಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರೋಹನ್ ಅವರಿಗೆ ಉಕ್ರೇರಿನಲ್ಲಿ ಯುದ್ಧ ಪ್ರಾರಂಭಗೊಂಡ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಪ್ರತಿದಿನ ಮನೆಗೆ ದೂರವಾಣಿ ಕರೆ ಮಾಡುವ ವೇಳೆ ಇಲ್ಲಿಂದ ಅವರಿಗೆ ಈ ಬಗ್ಗೆ ಸುಳಿವು ಸಿಕ್ಕಿತೆನ್ನಲಾಗಿದೆ. ನಿನ್ನೆಯವರೆಗೆ ಅವರಿಗೆ ಆಫ್‌ಲೈನ್ ಕ್ಲಾಸ್‌ಗಳು ನಡೆದಿದ್ದು, ನಿನ್ನೆ ಮತ್ತು ಇಂದು ಆನ್‌ಲೈನ್ ಕ್ಲಾಸ್ ನಡೆಯಿತೆನ್ನಲಾಗಿದೆ. ಕಾರ್ಕೀವ್‌ನಲ್ಲೂ ಯುದ್ಧ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ವಿದ್ಯಾರ್ಥಿಗಳೆಲ್ಲರೂ ಅಲ್ಲಿನ ಬಂಕರ್‌ಗಳಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಅವರು ಮನೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಯುದ್ಧ ಸಾಧ್ಯತೆಯ ಮಾಹಿತಿ ಸಿಕ್ಕಿದಾಗ ರೋಹನ್ ತಾಲ್ಲೂಾಡಿಗೆ ಮರಳಲು ವಿಮಾನ ಟಿಕೇಟ್ ಬುಕ್ ಮಾಡಿದ್ದು, ಮಾ.8ಕ್ಕೆ ಅವರ ಟಿಕೇಟ್ ಬುಕ್ ಆಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದೀಗ ರೋಹನ್ ಹಾಗೂ ಅವರ ಕುಟುಂಬ ಆತಂಕದಲ್ಲಿ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಾರ್ಕೀವ್‌ನ ನ್ಯಾಷನಲ್ ಮೆಡಿಕಲ್ ಯುನಿರ್ವಸಿಟಿ 1805ರಲ್ಲಿ ಸ್ಥಾಪನೆಗೊಂಡು 200 ವರ್ಷಗಳನ್ನು ಪೂರ್ಣಗೊಳಿಸಿದ ಕಾಲೇಜ್ ಆಗಿದೆ. ಇಲ್ಲಿ 10,000ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದು, 700ಕ್ಕೂ ಅಧಿಕ ಪ್ರಾಧ್ಯಾಪಕರು ಕಲಿಸುತಿದ್ದಾರೆ. ವಿಶ್ವದ ಅತ್ಯಂತ ಪುರಾತನ ವೈದ್ಯಕೀಯ ಕಾಲೇಜುಗಳಲ್ಲಿ ಇದೂ ಒಂದಾಗಿದೆ.

Leave a Reply

Your email address will not be published. Required fields are marked *

error: Content is protected !!