ಉಕ್ರೇನ್‌ ಪ್ರವೇಶಿಸಿದ ರಷ್ಯಾ ಭೂಸೇನೆ- ಯುದ್ಧದಲ್ಲಿ 100 ಮಂದಿ ಸಾವು

ಮಾಸ್ಕೋ: ದೀರ್ಘಕಾಲದ ಬಿಕ್ಕಟ್ಟಿನ ಬಳಿಕ ರಷ್ಯಾ ಗುರುವಾರ ಬೆಳಗ್ಗೆ 8:30ಕ್ಕೆ ಉಕ್ರೇನ್ ಮೇಲೆ ದಾಳಿ ಮಾಡಿದೆ. ರಷ್ಯಾದ ಪಡೆಗಳು ಹಲವಾರು ದಿಕ್ಕುಗಳಿಂದ ಉಕ್ರೇನ್‌ಗೆ ಪ್ರವೇಶಿಸಿವೆ ಎಂದು ಉಕ್ರೇನ್‌ನ ಗಡಿ ರಕ್ಷಣಾ ಪಡೆ ಹೇಳಿದೆ. ಅಲ್ಲದೆ ರಷ್ಯಾದ ಪಡೆಗಳು ಈಗ ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶ ಮಾಡಿವೆ.

ವರದಿಗಳ ಪ್ರಕಾರ, ಇದುವರೆಗೆ 40 ಉಕ್ರೇನ್ ಸೈನಿಕರು ಮತ್ತು 10 ನಾಗರಿಕರು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ 50 ರಷ್ಯಾದ ಯೋಧರನ್ನು ಹಾಗೂ 6 ಫೈಟರ್ ಜೆಟ್ ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.

ರಷ್ಯಾ ಮೂರು ಕಡೆಯಿಂದ ಅಂದರೆ ಬೆಲಾರಸ್, ಕ್ರಿಮಿಯಾ ಹಾಗೂ ಪೂರ್ವ ಭಾಗದ ಮೂಲಕ ಉಕ್ರೇನ್ ಮೇಲೆ ದಾಳಿ ಮಾಡುತ್ತಿದ್ದು, ಸಾಕಷ್ಟು ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗುತ್ತಿದೆ.

ಮತ್ತೊಂದೆಡೆ ಕೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚುವುದಿಲ್ಲ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಹೇಳಿದ್ದಾರೆ. ಇದು ಮೊದಲಿನಂತೆಯೇ ಕೆಲಸ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ, ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಅವರು “ಉಕ್ರೇನ್‌ನಿಂದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 20,000 ಭಾರತೀಯರನ್ನು ಕರೆತರಲು ವಿದೇಶಾಂಗ ಸಚಿವಾಲಯ ಕ್ರಮ ತೆಗೆದುಕೊಳ್ಳುತ್ತಿದೆ. ಉಕ್ರೇನ್‌ನಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದೆ, ಆದ್ದರಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಈ ನಡುವೆ ಉಕ್ರೇನ್ ರಾಯಭಾರಿ, ನವದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು, ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದರು. ಯುಎಸ್ ಮತ್ತು ಯುರೋಪಿಯನ್ ಯೂನಿಯನ್(ಇಯು) ಸಹ ಮಿಲಿಟರಿ ಮತ್ತು ಆರ್ಥಿಕ ದಾಳಿಗೆ ತಯಾರಿ ಆರಂಭಿಸಿವೆ. ಯುರೋಪಿಯನ್ ಯೂನಿಯನ್ ಅಧ್ಯಕ್ಷ ಉರ್ಸಾಲಾ, ರಷ್ಯಾದ ಆರ್ಥಿಕತೆಯು ನಾಶವಾಗುಲಿದೆ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!