ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ- ಮಧ್ಯೆ ಪ್ರವೇಶಿಸಿದರೆ ತಕ್ಕ ಪರಿಣಾಮ ಎದುರಿಸ ಬೇಕಾಗುತ್ತದೆ ಪುಟಿನ್ ಎಚ್ಚರಿಕೆ

ಮಾಸ್ಕೊ: ಅತ್ತ ಆಕ್ರಮಣಕಾರಿ ಯುದ್ಧ ಭೀತಿಯಿಂದ ಉಕ್ರೇನ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡುತ್ತಿದ್ದಂತೆ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಅವರು ಉಕ್ರೇನ್ ನ ಮಿಲಿಟರಿಗೆ ಕರೆ ನೀಡಿದ್ದಾರೆ. 

ಅಲ್ಲದೆ ರಷ್ಯಾ-ಉಕ್ರೇನ್ ನಡುವಣ ಬಿಕ್ಕಟ್ಟು ಮಿಲಿಟರಿ ಕಾರ್ಯಾಚರಣೆಯಲ್ಲಿ ಮಧ್ಯೆ ಪ್ರವೇಶಿಸಿದವರ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಕೂಡ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪುಟಿನ್, ನಮ್ಮ ದೇಶ ಮತ್ತು ನಮ್ಮ ಜನರಿಗೆ ಬೆದರಿಕೆ ಉಂಟುಮಾಡಲು ನೋಡಿದರೆ, ನಮ್ಮ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುವ ಯಾರಿಗಾದರೂ ರಷ್ಯಾದಿಂದ ಪ್ರತಿಕ್ರಿಯೆ ತಕ್ಷಣವೇ ಬರುತ್ತದೆ, ಎಚ್ಚರ ನಿಮ್ಮ ಇತಿಹಾಸದಲ್ಲಿ ನೀವು ಹಿಂದೆಂದೂ ಅನುಭವಿಸದಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಗತ್ತಿನ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‌ನ ಪ್ರದೇಶಗಳನ್ನು, ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುವುದು ನಮ್ಮ ಯೋಜನೆಯಲ್ಲ. ಉಕ್ರೇನ್‌ನ ಮಿಲಿಟರಿ ಶಕ್ತಿಯನ್ನು ಮಟ್ಟಹಾಕುವುದು ಮತ್ತು ಉಕ್ರೇನ್  ನಾಜಿ ತತ್ವವನ್ನು ತೊಡೆದು ಹಾಕುವುದು ಮತ್ತು ನಮ್ಮ ದೇಶದ ಜನರ ರಕ್ಷಣೆ ನಮ್ಮ ಗುರಿಯಾಗಿದೆ, ಉಕ್ರೇನ್ ಕಡೆಯಿಂದ ಬೆದರಿಕೆಯಿರುವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇದು ಪ್ರತೀಕಾರದ ಕ್ರಮವಾಗಿದೆ ಎಂದು ಕೂಡ ಹೇಳಿದ್ದಾರೆ.

ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಉಕ್ರೇನ್ ನ್ಯಾಟೊ(NATO) ಸೇರುವುದನ್ನು ತಡೆಯಬೇಕೆಂದು ಮತ್ತು ಮಾಸ್ಕೊಗೆ ಭದ್ರತಾ ಖಾತ್ರಿ ನೀಡಬೇಕೆಂಬ ರಷ್ಯಾದ ಬೇಡಿಕೆಯನ್ನು ನಿರಾಕರಿಸುತ್ತಲೇ ಬಂದಿವೆ ಎಂದು ಕೂಡ ಪುಟಿನ್ ಆರೋಪಿಸಿದ್ದಾರೆ.

ಭಾರೀ ಸ್ಫೋಟಕ ಶಬ್ದ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ದೇಶವನ್ನು ಸೈನ್ಯಮುಕ್ತಗೊಳಿಸುವುದಾಗಿ ಘೋಷಣೆ ಮಾಡಿದ ಕೆಲವೇ ಹೊತ್ತಿನಲ್ಲಿ ಪೂರ್ವ ಬಂದರು ನಗರವಾದ ಮರಿಯುಪೋಲ್‌ನಲ್ಲಿ ಪ್ರಬಲ ಸ್ಫೋಟಗಳು ಕೇಳಿಬಂದವು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಉಕ್ರೇನ್ ದೇಶದೊಳಗೆ ನಾಗರಿಕ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ. ವಿಮಾನ ಕಾರ್ಯಾಚರಣೆಗಳಿಗೆ ಸೂಚನೆ ನೀಡಲಾಗಿದೆ. ಏರ್ ಇಂಡಿಯಾದ ಎರಡನೇ ವಿಶೇಷ ವಿಮಾನ AI- 1947 ಇಂದು ಬೆಳಿಗ್ಗೆ ಉಕ್ರೇನ್‌ನ ಬೋರಿಸ್ಪಿಲ್ ವಿಮಾನ ನಿಲ್ದಾಣಕ್ಕೆ ಹೊರಟಿದೆ

Leave a Reply

Your email address will not be published. Required fields are marked *

error: Content is protected !!