ತಕ್ಷಣ ಉಕ್ರೇನ್ ತೊರೆಯುವಂತೆ ಭಾರತದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಮನವಿ

ಕೈವ್‌: ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯುದ್ಧ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸ್ವದೇಶಕ್ಕೆ ಮರಳುವಂತೆ ಕೈವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿಗಳಿಗೆ ಮಂಗಳವಾರ ಮತ್ತೊಮ್ಮೆ ಮನವಿ ಮಾಡಿದೆ.

ಭಾರತೀಯ ರಾಯಭಾರ ಕಚೇರಿಯು ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿಗಳ ದೃಢೀಕರಣದ ಕುರಿತು ಹೆಚ್ಚಿನ ಕರೆಗಳನ್ನು ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳಿಂದ ಆನ್‌ಲೈನ್ ತರಗತಿಗಳ ದೃಢೀಕರಣಕ್ಕೆ ಕಾಯುವ ಬದಲು ಸ್ವದೇಶಕ್ಕೆ ಮರಳುವಂತೆ ಭಾರತೀಯ ರಾಯಭಾರ ಕಚೇರಿಯು ಹೇಳಿದೆ.

ಈ ನಿಟ್ಟಿನಲ್ಲಿ, ಮೊದಲೇ ತಿಳಿಸಿದಂತೆ, ಭಾರತೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಯಭಾರ ಕಚೇರಿಯು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದೆ. ಇದು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮೂರನೇ ಸಲಹೆಯಾಗಿದೆ. ಫೆಬ್ರವರಿ 20 ರಂದು ನೀಡಿದ ಸಲಹೆಯಲ್ಲಿ, ಉಕ್ರೇನ್‌ ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದ ಉದ್ವಿಗ್ನತೆ ಮತ್ತು ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ, ಉಳಿದು ಕೊಳ್ಳುವುದು ಅನಿವಾರ್ಯವಲ್ಲದ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿತ್ತು. ಫೆಬ್ರವರಿ 15 ರಂದು ರಾಯಭಾರ ಕಚೇರಿಯು ಭಾರತೀಯರು ಸ್ವದೇಶಕ್ಕೆ ಹಿಂತಿರುಗುವಂತೆ ಕೇಳಿಕೊಂಡಿತ್ತು.

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಭಾರತೀಯರನ್ನು ಮರಳಿ ಕರೆತರುವ ಸಲುವಾಗಿ ಉಕ್ರೇನ್‌ಗೆ ನಿಯೋಜನೆ ಗೊಂಡಿರುವ ಮೂರು ಏರ್ ಇಂಡಿಯಾ ವಿಮಾನಗಳಲ್ಲಿ ಮೊದಲನೆಯದು ಮಂಗಳವಾರ ಬೆಳಗ್ಗೆ 7:36ಕ್ಕೆ ನವದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಹೊರಟಿದೆ. ಉಕ್ರೇನ್‌ನ ಎರಡು ಪ್ರಾಂತ್ಯಗಳನ್ನು ಸ್ವತಂತ್ರ ರಾಷ್ಟ್ರಗಳೆಂದು ರಷ್ಯಾ ಘೋಷಿಸಿದ ನಂತರ ಎರಡೂ ರಾಷ್ಟ್ರಗಳ ಮಧ್ಯೆದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಉಕ್ರೇನ್ ಮತ್ತು ಅದರ ಗಡಿ ಪ್ರದೇಶಗಳಲ್ಲಿ 20 ಸಾವಿರಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಅವರನ್ನು ಸ್ವದೇಶಕ್ಕೆ ಮರಳಿ ಕರೆತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಇಂದು ಬೆಳಗ್ಗೆ ಏರ್ ಇಂಡಿಯಾದ ವಿಶೇಷ ವಿಮಾನವನ್ನು ಉಕ್ರೇನ್‌ಗೆ ಕಳುಹಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಿಂದ 256 ಭಾರತೀಯ ವಿದ್ಯಾರ್ಥಿಗಳು ಇಂದು ದೇಶಕ್ಕೆ ಮರಳಲಿದ್ದಾರೆ.

ಏರ್ ಇಂಡಿಯಾ ಫ್ಲೈಟ್ ಡ್ರೀಮ್‌ಲೈನರ್ B-787 ಮೂಲಕ ಇಂದು ರಾತ್ರಿ 10.15ಕ್ಕೆ ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ವಾಪಸ್ ಆಗಲಿದ್ದಾರೆ. ಇದು 200 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ ಇನ್ನೂ 4 ವಿಮಾನಗಳು ಕಾರ್ಯನಿರ್ವಹಿಸಲಿವೆ. ಭಾರತದ ರಾಯಭಾರ ಕಚೇರಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೀವ್‌ನಿಂದ ದೆಹಲಿಗೆ 4 ವಿಮಾನಗಳು ಫೆಬ್ರವರಿ 25, ಫೆಬ್ರವರಿ 27 ಮತ್ತು ಮಾರ್ಚ್ 6, 2022 ರಂದು ಕಾರ್ಯನಿರ್ವಹಿಸಲಿವೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!