| ಉಡುಪಿ ಫೆ.22(ಉಡುಪಿ ಟೈಮ್ಸ್ ವರದಿ): ಮಲ್ಪೆಯ ಹೈದರ್ ಎಂಬುವವರ ಹೋಟೆಲ್ ನುಗ್ಗಿ ಅವರ ಮಗನಿಗೆ ಹಲ್ಲೆ ಮಾಡಿ ಹೋಟೆಲ್ ಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ ಮಾಡಿಕೊಂಡಿದೆ.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಫೆ.21 ರಂದು ರಾತ್ರಿ 8.30ರ ವೇಳೆಗೆ ಸಂಘಪರಿವಾರದ ಕಿಡಿಗೇಡಿಗಳು ಸುಮಾರು 60 ರಿಂದ 70 ಮಂದಿಯ ಗುಂಪು ಹೈದರ್ ಮಾಲಕತ್ವದ ಬಿಸ್ಮಿಲ್ಲಾ ಹೋಟೆಲ್ ಗೆ ನುಗ್ಗಿ ಅವರ ಮಗನಾದ ಸೈಫ್ ಅವರ ಮೇಲೆ ಹಲ್ಲೆ ನಡೆಸಿ, ಹೋಟೆಲಿನ ಆಸ್ತಿಹಾನಿ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ಅವಮಾನ ಮಾಡಿರುತ್ತಾರೆ. ಬಳಿಕ ಆಸ್ಪತ್ರೆಗೆ ದಾಖಲಾದ ಸೈಫ್, ಕೇವಲ ಒಬ್ಬನ ಮೇಲೆ ದೂರನ್ನು ದಾಖಲಿಸಿರುತ್ತಾರೆ. ಗುಂಪಿನೊಂದಿಗೆ ಹೊಟೇಲಿಗೆ ನುಗ್ಗಿ ದಾಂಧಲೆ ಮಾಡಿದ್ದರೂ ಕೇವಲ ಒಬ್ಬರ ಮೇಲೆ ಪ್ರಕರಣ ದಾಖಲಾಗಿರುತ್ತದೆ.ಈ ರೀತಿ ಕ್ರತ್ಯಗಳನ್ನೆಸಗಿ ಅಶಾಂತಿಯನ್ನು ಸೃಷ್ಟಿಸುತ್ತಿರುವ ಹಿಂದಿರುವ ಸಮಾಜಘಾತುಕ ಶಕ್ತಿಗಳು ಮತ್ತು ಈ ಪ್ರಕರಣದ ನೇತೃತ್ವ ವಹಿಸಿದ ಸರ್ವರ ಮೇಲೂ ದೂರುದಾಖಲಿಸಿ ಕಠಿಣ ಕಾನೂನು ಕ್ರಮಕೈಗೊಂಡು ಸಮಾಜದಲ್ಲಿ ಶಾಂತಿಯನ್ನು ಕಾಪಾಡಬೇಕಾಗಿ ಮನವಿ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ ಇದರ ಮುಸ್ಲಿಮ್ ವಿದ್ಯಾರ್ಥಿನಿ ಯರ ಕುರಿತ ಮಾಹಿತಿಯನ್ನು ಒಳಗೊಂಡ ದಾಖಲೆಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿರುತ್ತದೆ. ಅದರಿಂದಾಗಿ ಅದರಲ್ಲಿದ್ದಂತಹ ಮೊಬೈಲ್ ಸಂಖ್ಯೆಗೆ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆ ಮಾಡಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಈ ಮಾಹಿತಿಯನ್ನು ಕಾಲೇಜಿನ ಆಡಳಿತ ವ್ಯವಸ್ಥೆಯಿಂದ ಹೇಗೆ ಹೊರಬಂತು ಹಾಗೂ ಇದನ್ನು ಏಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಯಿತು. ಇದರ ಕುರಿತು ಸೂಕ್ತ ತನಿಖೆ ನಡೆಸಿ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿಸಲಾಗಿದೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ವೇಳೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ಉಪಾಧ್ಯಕ್ಷ, ಇದ್ರೀಸ್ ಹೂಡೆ, ಜಿಲ್ಲಾ ಸಮಿತಿಯ ಸದಸ್ಯರಾದ ಜಾಫರ್, ಇಕ್ಬಾಲ್ ಮನ್ನಾ, ಅಜೀಜ್ ಉದ್ಯಾವರ, ಎಸ್ ಐ ಓ ಜಿಲ್ಲಾಧ್ಯಕ್ಷರ ಅಫ್ವಾನ್ ಹೂಡೆ ಉಪಸ್ಥಿತರಿದ್ದರು.
| |