| ಉಡುಪಿ ಫೆ.22(ಉಡುಪಿ ಟೈಮ್ಸ್ ವರದಿ): ಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ದುರುಪಯೋಗ ಪಡಿಸಿಕೊಂಡು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟ್ ನಲ್ಲಿ ತಡೆಯುತ್ತಿರುವುದನ್ನು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ ಕ್ಯಾಂಪಸ್ ಸಿಂಡಿಕೇಟ್ ನ ಸದಸ್ಯ ಮುಹಮ್ಮದ್ ರಕೀಬ್ ಕನ್ನಂಗಾರ್ ಮುಹಮ್ಮದ್ ರಕೀಬ್ ಕನ್ನಂಗಾರ್ ಖಂಡಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಹೆಣ್ಣುಮಕ್ಕಳು ಶಿರವಸ್ತ್ರ ಧರಿಸುವುದು ಮುಸ್ಲಿಮರ ಧಾರ್ಮಿಕ ಸಂಸ್ಕೃತಿಯಾಗಿದ್ದು ಪುರಾತನ ಕಾಲದಿಂದಲೂ ಅದನ್ನು ಪಾಲಿಸುತ್ತಾ ಬಂದಿದ್ದಾರೆ.ಸಮವಸ್ತ್ರ ದ ನೆಪದಲ್ಲಿ ಏಕಾಏಕಿ ಶಿರವಸ್ತ್ರವನ್ನು ನಿರಾಕರಿಸುವುದು ಯಾವುದೋ ಷಡ್ಯಂತ್ರದ ಭಾಗವೆಂದೇ ಭಾವಿಸಬೇಕಾಗುತ್ತದೆ.ಸಮವಸ್ತ್ರ ಜಾರಿಯಲ್ಲಿರುವ ಸಂಸ್ಥೆಗಳಲ್ಲಿ ಸಮವಸ್ತ್ರಕ್ಕೆ ಧಕ್ಕೆಯಾಗದಂತೆ ಶಿರವಸ್ತ್ರ ಧರಿಸಲಾಗುತ್ತದೆ. ಇಲ್ಲಿ ಯಾರೂ ಕೂಡಾ ಅವರವರ ಧರ್ಮವನ್ನು ಅನುಸರಿಸುವುದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. ಆದರೆ ಇಲ್ಲಿ ರಾಜಕೀಯ ಪ್ರೇರಿತವಾಗಿ ಶಿರವಸ್ತ್ರವನ್ನು ನಿಷೇಧಿಸುವ ಹಾಗೂ ಮೊಟಕು ಗೊಳಿಸುವ ಕೆಲಸ ನಡೆಯುತ್ತಿದೆ ಎಂದರು.
ಹೈಕೋರ್ಟ್ ಸಂವಿಧಾನ ಬದ್ಧವಾದ ತೀರ್ಪು ನೀಡಬಹುದು ಎಂಬ ವಿಶ್ವಾಸವಿದೆ ಎಂದ ಅವರು, ವಿದ್ಯಾರ್ಥಿನಿಯರಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದು, ಇಂತಹ ವಿವಾದದಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪುರಾತನ ಕಾಲದಿಂದಲೂ ಮುಸ್ಲಿಮ್ ಹೆಣ್ಣು ಮಕ್ಕಳು ಧರಿಸುತ್ತಿರುವ ಶಿರವಸ್ತ್ರವನ್ನು ತೆಗೆಸುವುದಕ್ಕಾಗಿ ಕೇಸರಿ ಶಾಲನ್ನು ಹೊಸತಾಗಿ ಆರಂಭಿಸಲಾಗಿದೆ. ಕೇಸರಿ ಶಾಲು ಮುಸ್ಲಿಮರ ಶಿರವಸ್ತ್ರದಂತೆ ಧಾರ್ಮಿಕವಾಗಿ ಅನಿವಾರ್ಯವಾಗಿದ್ದರೆ ಈ ಹಿಂದೆ ಯಾರೂ ಅದನ್ನು ಧರಿಸಿರಲಿಲ್ಲವೇಕೆ? ಇಲ್ಲಿ ವಿವಾದಕ್ಕಾಗಿ ವಿವಾದವನ್ನು ಸೃಷ್ಟಿಸಲಾಗಿದೆ ಎನ್ನುವುದಕ್ಕೆ ಬೇರೇನು ಪುರಾವೆಬೇಕು? ಎಂದಿದ್ದಾರೆ.
ಈಗಾಗಲೇ ಸಮವಸ್ತ್ರ ಜಾರಿಯಲ್ಲಿದ್ದು ವಿವಾದ ಉಂಟಾಗಿರುವ ಸಂಸ್ಥೆಗಳಿಗೆ ಅನ್ವಯವಾಗುವಂತೆ ಕೋರ್ಟು ನೀಡಿರುವ ಮಧ್ಯಂತರ ತೀರ್ಪು ಇತರ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲವೆಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದಾಗ್ಯೂ ಕೆಲವು ಸಂಸ್ಥೆಗಳ ಮುಖ್ಯಸ್ಥರು ಹಿಜಾಬನ್ನು ತೆಗೆಸಲು ಒತ್ತಡ ಹೇರುತ್ತಿದ್ದು, ಒಪ್ಪದವರನ್ನು ಹೊರಗೆ ನಿಲ್ಲಿಸುವ ಇಲ್ಲವೇ ಮನೆಗೆ ಕಳಹಿಸುವ ಪ್ರಯತ್ನ ನಡೆದಿದೆ. ಕೋರ್ಟು ಆದೇಶ ಪಾಲಿಸುವಂತೆ ಹೇಳುವ ಪ್ರಸ್ತುತ ಸಂಸ್ಥೆಗಳ ಮುಖ್ಯಸ್ಥರು ವಾಸ್ತವದಲ್ಲಿ ತಾವೇ ಕೋರ್ಟು ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ತಲೆಗೆ ಹಿಜಾಬು ಧರಿಸುವುದರಿಂದಲೋ ಹಣೆಗೆ ಕುಂಕುಮ ಹಚ್ಚುವುದರಿಂದಲೋ ಸಮಾನತೆಗೇನೂ ಅಡ್ಡಿಯುಂಟಾಗುವುದಿಲ್ಲ. ಕಾಲೇಜು ವಿದ್ಯಾರ್ಥಿಗಳು ವಿವಿಧತೆಯಲ್ಲಿ ಏಕತೆ ಎಂಬ ದೇಶದ ವಾಸ್ತವಿಕತೆ ಯನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧರೇನಲ್ಲ. ಕೇವಲ ಸಾಂಕೇತಿಕ ಸಮಾನತೆಗಾಗಿ ಸಮವಸ್ತ್ರ ಸಂಹಿತೆಯನ್ನು ಹೇರಿ ಮುಸ್ಲಿಂ ಹೆಣ್ಣುಮಕ್ಕಳ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳಬಾರರು ಹಾಗೂ ಅವರ ಶೈಕ್ಷಣಿಕ ಬೆಳವಣಿಗೆಗೆ ತೊಡಕುಂಟು ಮಾಡಬಾರದು. ಮುಂದಿನ ದಿನಗಳಲ್ಲಾದರೂ ಮಕ್ಕಳು ಪರೀಕ್ಷೆಗೆ ಗಮನ ಕೇಂದ್ರೀಕರಿಸುವಂತಾಗಬೇಕು ಆಗ್ರಹಿಸಿದರು.
ಇದೇ ವೇಳೆ ಶಿವಮೊಗ್ಗದಲ್ಲಿ ನಡೆದ ಹರ್ಷ ಅವರ ಕೊಲೆ ಪ್ರಕರಣವನ್ನು ಉಲ್ಲೇಖಿಸಿರುವ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಯುವಕನೊಬ್ಬನ ಹತ್ಯೆಯನ್ನು ಎಸ್ಸೆಸ್ಸೆಫ್ ಖಂಡಿಸುತ್ತದೆ. ಹತ್ಯೆ, ಹಲ್ಲೆ, ಪ್ರತಿ ಹಿಂಸೆಗಳಿಂದ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅಪರಾಧಿಗಳನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ನ್ಯಾಯ ಒದಗಿಸಲು ಸಂಬಂಧಪಟ್ಟವರು ಮುಂದಾಗಬೇಕು. ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಪ್ರತಿಭಟನೆಗಳನ್ನು ದಾಖಲಿಸಬೇಕಿದೆ. ಕಾನೂನನ್ನು ಕೈಗೆತ್ತಿಕೊಳ್ಳಲು ಹಿಂಸಾಚಾರವೆಸಗಲು ಮುಂದಾಗಬಾರದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ನ ಕ್ಯಾಂಪಸ್ ಕಾರ್ಯದರ್ಶಿ ಶಾಹುಲ್ ಹಮೀದ್ ನ ಈಮಿ, ರಾಜ್ಯ ಎಸ್ ಎಸ್ ಎಫ್ ನ ಸದಸ್ಯ ಕೆಎಸ್ ಎಂ ಮನ್ಸೂರ್ ಉಡುಪಿ, ಜಿಲ್ಲಾ ಎಸ್ಎಸ್ಎಪ್ ನ ಕ್ಯಾಂಪಸ್ ಕನ್ವೀನರ್ ಹ್ಯಾರಿಸ್ ಮಾಸ್ಟರ್ ಹೊಸ್ಮಾರು, ಹೆಲ್ಪ್ ಡೆಸ್ಕ್ ಕನ್ವೀನರ್ ಇಮ್ರಾನ್ ಬಶೀರ್ ಕಾಪು ಉಪಸ್ಥಿತರಿದ್ದರು. | |