ಹರ್ಷ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ- ಒಟ್ಟು 12 ಮಂದಿ ವಶಕ್ಕೆ
ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರೊಂದಿಗೆ ಪ್ರಕರಣ ಸಂಬಂಧ ಬಂಧನಕ್ಕೊಳಗಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಪ್ರಕರಣ ಸಬಂಧ ಪೊಲೀಸರು ಈ ಹಿಂದೆ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಮತ್ತ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಿಬ್ಬರೂ ಶಿವಮೊಗ್ಗ ಮೂಲದವರಾಗಿದ್ದು, 12 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ಬಜರಂಗದಳ ಕಾರ್ಯಕರ್ತ ಹರ್ಷ ಎಂಬುವವರ ಬರ್ಬರ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಸೋಮವಾರ ಇಡೀ ಶಿವಮೊಗ್ಗ ಹೊತ್ತಿ ಉರಿದಿದೆ. ದಿನವಿಡೀ ಉದ್ರಿಕ್ತ ಗುಂಪುಗಳು ಕಂಡ ಕಂಡಲ್ಲಿ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರಿ, ವಾಹನಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕಿಳಿದಿದ್ದು, ಈ ವೇಳೆ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ನಿಷೇಧಾಜ್ಞೆ ನಡುವೆಯೇ ನಡದ ಈ ಭಾರೀ ಹಿಂಸಾಚಾರ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚದುರಿಸಿದರು.
ಇಷ್ಟಾದರೂ ಬೆಳಿಗ್ಗೆ 11.45ಕ್ಕೆ ಆರಂಭವಾದ ಹಿಂಸಾಚಾರ ಸಂಜೆ 5.30ರವರಗೂ ನಡೆದಿತು. ಶಿವಮೊಗ್ಗ ಹಿಂಸಾಚಾರ ದಲ್ಲಿ 30ಕ್ಕೂ ಹೆಚ್ಚು ಅಂಗಡಿಗಳು, 32 ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದ್ದು, ಹತ್ತಕ್ಕೂ ಹೆಚ್ಚು ವಾಹನಗಳು ಸುಟ್ಟುಕರಕಲಾಗಿವೆ. ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆಯನ್ನು 2 ದಿನ ವಿಸ್ತರಿಸಲಾಗಿದೆ. ಇದೇ ವೇಳೆ ಬುಧವಾರ ಬೆಳಿಗ್ಗೆ 6 ರವರೆಗೆ ಕರ್ಫ್ಯೂವನ್ನೂ ಘೋಷಿಸಲಾಗಿದೆ. ಭದ್ರತಾವತಿಯಲ್ಲೂ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿದುಬಂದಿದ್ದು, ಶಾಲೆ-ಕಾಲೇಜುಗಳಿಗೂ ರಜೆ ಮುಂದುವರಿಸಲಾಗಿದೆ. ಪ್ರಕರಣದಲ್ಲಿ 7 ಮಂದಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.