| ಹಿರಿಯಡ್ಕ ಫೆ.22(ಉಡುಪಿ ಟೈಮ್ಸ್ ವರದಿ): ಇಲ್ಲಿನ ಅಂಜಾರು ಹಾಗೂ ಬೊಮ್ಮರ ಬೆಟ್ಟು ಗ್ರಾಮದಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಎರಡು ಪ್ರತ್ಯೇಕ ಘಟನೆ ನಡೆದಿದೆ.
ಅಂಜಾರು ಗ್ರಾಮದ ಪೊಲೀಸ್ ವಸತಿಗ್ರಹದ ಬಳಿ ಸಂಗೀತಾ(28) ಎಂಬ ವಿವಾಹಿತ ಮಹಿಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಗೀತಾ ಅವರು ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದು, ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ತಂದೆ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮತ್ತೊಂದು ಕಡೆಯಲ್ಲಿ ಪರೀಕ್ಷೆಯ ಭಯದಿಂದ 10ನೇ ತರಗತಿಯ ಜಿಸಾನ್ ಎಂಬ ವಿದ್ಯಾರ್ಥಿಯೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಣಿಪಾಲದ ಎಂಜೆಸಿ ಕಾಲೇಜಿನಲ್ಲಿ 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಕೊಂಡಿದ್ದ ಈತ ಮೊದಲಿನಿಂದಲೂ ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ಒಬ್ಬಂಟಿಯಾಗಿ ಇರುತ್ತಿದ್ದನು. ಕಳೆದ ವಾರ ಶಾಲೆಗೆ ಸರಿಯಾಗಿ ಹೋಗದೇ ಇದ್ದ ಈತ ಪರೀಕ್ಷೆಗೆ ಹೋಗದ ಬಗ್ಗೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಿನ್ನೆ ತಾಯಿ ಕೆಲಸಕ್ಕೆ ಹೋದ ಬಳಿಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಪರೀಕ್ಷೆಯ ಭಯದಿಂದಲೋ ಅಥವಾ ತನ್ನ ಯಾವುದೋ ವ್ಯೆಯಕ್ತಿಕ ಕಾರಣದಿಂದಲೋ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಅಣ್ಣ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |