ಹಿಜಾಬ್ ವಿವಾದ: ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ತಂದೆಯ ಹೋಟೆಲಿಗೆ ನುಗ್ಗಿ ಹಲ್ಲೆ
ಮಲ್ಪೆ, ಫೆ. 22 : ಹಿಜಾಬ್ ವಿವಾದ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ತಂದೆಗೆ ಸೇರಿದ ರೆಸ್ಟೋರೆಂಟ್ ಮೇಲೆ ಗುಂಪೊಂದು ನಿನ್ನೆ ರಾತ್ರಿ ದಾಳಿ ನಡೆಸಿದ ಘಟನೆ ನಡೆದಿದೆ.
ಘಟನೆ ವೇಳೆ ಕಿಡಿಗೇಡಿಗಳ ಗುಂಪು ಹೈದರ್ ಅವರ ಮಗ ಸೈಫ್ (20) ಮೇಲೆ ಹಲ್ಲೆ ನಡೆಸಿರುವ ಆರೋಪವು ಕೇಳಿ ಬಂದಿದ್ದು, ಹಲ್ಲೆಗೊಳಗಾಗಿರುವ ಶಿಫಾ ಅವರ ಸಹೋದರ ಸೈಫ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಿದ್ದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಕಾಲೇಜು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ಶಿಫಾ ಅವರ ತಂದೆ ಹೈದರ್ ಅಲಿ ಅವರಿಗೆ ಸೇರಿದ ಮಲ್ಲೆಯಲ್ಲಿರುವ ‘ಬಿಸ್ಮಿಲ್ಲಾ ಹೋಟೆಲ್’ ಮೇಲೆ ಸುಮಾರು 50 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಪರಿಣಾಮ ರೆಸ್ಟೋರೆಂಟ್‌ನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದ್ದು, ಕೃತ್ಯ ಎಸಗಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.