ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ: ಹೈಕೋರ್ಟ್ ಗೆ ನಿಲುವು ಸ್ಪಷ್ಟಪಡಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಕರ್ನಾಟಕ ಸರ್ಕಾರ ಹಿಜಾಬ್ ವಿಷಯದಲ್ಲಿ ತನ್ನ ನಿಲುವನ್ನು ಹೈಕೋರ್ಟ್ ಗೆ ಸ್ಪಷ್ಟಪಡಿಸಿದ್ದು, ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಹೇಳಿದೆ.
ಡಾ.ಬಿ. ಆರ್ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ವಾದ ಮಂಡಿಸಿರುವ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಪ್ರಭುಲಿಂಗ ನವಡಗಿ, “ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಂದ ಧಾರ್ಮಿಕ ಬೋಧನೆಗಳನ್ನು ಹೊರಗಿಡಬೇಕು” ಎಂದು ಹೇಳಿದ್ದಾರೆ. ಮುಖ್ಯ ನ್ಯಾ.ರಿತುರಾಜ್ ಅವಸ್ಥಿ, ನ್ಯಾ. ಜೆಎಂ ಖಾಜಿ ಹಾಗೂ ನ್ಯಾ. ಕೃಷ್ಣ ಎಂ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿತ್ತು.
ಅಡ್ವೊಕೇಟ್ ಜನರಲ್ ಪ್ರಕಾರ ಕಡ್ಡಾಯ ಧಾರ್ಮಿಕ ಆಚರಣೆಗಳು ಮಾತ್ರ ಆರ್ಟಿಕಲ್ 25 ರ ಅಡಿಯಲ್ಲಿ ರಕ್ಷಣೆ ಪಡೆಯುತ್ತವೆ ಹಾಗೂ ಪ್ರಜೆಗಳಿಗೆ ತಾವು ನಂಬಿದ ಮತವನ್ನು ಆಚರಣೆ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ. ಪ್ರಭುಲಿಂಗ ನಾವಡಗಿ ವಾದ ಮಂಡನೆ ವೇಳೆ, ಸಿಜೆ ವಕೀಲರನ್ನು ಪ್ರಶ್ನಿಸಿದ್ದು, ಸರ್ಕಾರದ ಆದೇಶ ನಿರುಪದ್ರವಿಯಾಗಿದೆ ಹಾಗೂ ರಾಜ್ಯ ಸರ್ಕಾರ ಹಿಜಬ್ ನಿಷೇಧವನ್ನಾಗಲೀ ಅಥವಾ ಹಿಜಬ್ ಗೆ ನಿರ್ಬಂಧವನ್ನಾಗಲೀ ವಿಧಿಸಿಲ್ಲ ಎಂದು ಹೇಳುತ್ತೀರಿ. ಆದರೆ ಸರ್ಕಾರಿ ಆದೇಶದಲ್ಲಿ ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರವನ್ನೇ ಧರಿಸಬೇಕೆಂದು ಹೇಳುತ್ತದೆ. ನಿಮ್ಮ ನಿಲುವೇನು? ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಗೆ ಅನುಮತಿ ನೀಡಬಹುದೇ? ಬೇಡವೇ? ಎಂಬುದನ್ನು ತಿಳಿಸಿ ಎಂದು ಹೇಳಿದ್ದಾರೆ.