ಗೋವುಗಳ ರಕ್ಷಣೆಗಾಗಿ ದೇಶದಲ್ಲಿ ಪ್ರಬಲ ಕಾನೂನು ಜಾರಿಗೆ ಬರುವ ಅಗತ್ಯವಿದೆ- ಸಚಿವ ಈಶ್ವರಪ್ಪ
ಕಾಪು ಫೆ.21: ಗುರ್ಮೆ ಫೌಂಡೇಶನ್ ವತಿಯಿಂದ ದಿ.ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ಸ್ಮರಣಾರ್ಥ ಕಾಪುವಿನ ಕಳತ್ತೂರಿನ ಗುರ್ಮೆಯಲ್ಲಿ ನಿರ್ಮಿಸಲಾದ ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆ ಹಾಗೂ ಕೀರ್ತನ ಸಾಂತ್ವನ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು ಬಳಿಕ ಆಶೀರ್ವಚನ ನೀಡಿ ಮಾತನಾಡಿದ ಅವರು, ಅವರು, ಮಾತೃ ಸೇವೆ ಮತ್ತು ಗೋ ಸೇವೆಯಿಂದ ಮನುಷ್ಯನಿಗೆ ಅನುಗ್ರಹದ ಜೊತೆಯೇ ರಕ್ಷಣೆಯೂ ಪ್ರಾಪ್ತಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಮಾತನಾಡಿ ನಮಗೆ ರಕ್ಷಣೆ ನೀಡುವ ಗೋವು ಮಾರ್ಗದರ್ಶನ ನೀಡುವ ಕಾವಿ ಮತ್ತು ನಮ್ಮನ್ನು ಪೋಷಿಸಿ ಬೆಳೆಸಿದ ತಾಯಿಗೆ ಸಮಾನ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು. ಹಾಗೂ ವಯಸ್ಸಾದ ತಂದೆ-ತಾಯಿಯರನ್ನು ಹೇಗೆ ಮಮತೆ ಯಿಂದ ಸಾಕಿ ಸಲಹುತ್ತೇವೆಯೋ ಅದೇ ರೀತಿ ಗೋವುಗಳನ್ನು ಸಹ ಪ್ರೀತಿಯಿಂದ ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಗೋವುಗಳ ರಕ್ಷಣೆಗಾಗಿ ನಮ್ಮ ದೇಶ ಮತ್ತು ರಾಜ್ಯದಲ್ಲಿ ಗೋಹತ್ಯಾ ನಿಷೇಧದ ಪ್ರಬಲ ಕಾನೂನು ಜಾರಿಗೆ ಬರುವ ಅಗತ್ಯವಿದೆ ಈ ಬಗ್ಗೆ ಪ್ರತಿಯೊಬ್ಬರೂ ಪ್ರತಿಜ್ಞೆ ಸ್ವೀಕರಿಸೋಣ ಎಂದು ಸಲಹೆ ನೀಡಿದರು.
ಇದೇ ವೇಳೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮನೆಯನ್ನೇ ಗೋ ಗೃಹ ವನ್ನಾಗಿ ಸಿಕೊಂಡು ಅವುಗಳಿಗೆಂದೇ 3 ಎಕರೆ ಪ್ರದೇಶದಲ್ಲಿ ಗೋವಿಹಾರ ಕೇಂದ್ರ ಕೇಂದ್ರ ನಿರ್ಮಿಸುವ ಮೂಲಕ ಗೋವುಗಳ ಸೇವೆಯಲ್ಲಿ ತಾಯಿಯ ಸೇವೆಯನ್ನು ಗೈಯುವ ಅಪರೂಪದ ವ್ಯಕ್ತಿತ್ವ ಗುರ್ಮೆಯಲ್ಲಿ ಅನಾವರಣ ಗೊಂಡಿದೆ ಎಂದರು.
ಈ ವೇಳೆ ಗೌರಿಗದ್ದೆ ಸ್ವರ್ಣ ಪೀಠಕಾಪುರದ ಅವಧೂತ ಶ್ರೀ ವಿನಯ ಗುರೂಜಿ ಆಶೀರ್ವಚನ ನೀಡಿ ಸಮಾಜದ ಸೇವೆಯನ್ನು ಕಳಿಸುತ್ತಿರುವ ಗುರ್ಮೆ ಸಹೋದರರ ಸೇವೆಯಿಂದ ಸಮಾಜ ಸಂತುಷ್ಟಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಭರತ್ ಶೆಟ್ಟಿ, ಉದ್ಯಮಿ ಕೆ ಪ್ರಕಾಶ್ ಶೆಟ್ಟಿ ಬಂಜಾರ, ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಸುಮಾರು 600 ಮಂದಿ ಅನಾರೋಗ್ಯ ಪೀಡಿತರಿಗೆ ಸಾಂತ್ವನ ಯೋಜನೆಯಡಿ ತಲಾ 5,000 ರೂ. ಗಳಂತೆ ಧನ ಸಹಾಯ, 280 ಮಂದಿ ಆಶಾ ಕಾರ್ಯಕರ್ತೆಯರು, ದಾದಿಗಳು ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಪಡಿತರ ಕಿಟ್ ಮತ್ತು ಸೀರೆ ವಿತರಣೆ, 40 ಮಂದಿ ಪೌರ ಕಾರ್ಮಿಕರಿಗೆ ಪಡಿತರ ಕಿಟ್ ಮತ್ತು ಪ್ಯಾಂಟ್ ಶರ್ಟ್ ಪೀಸ್ ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮುಂಬೈ ಸಾಹಿತಿ ಭರತ್ ಕುಮಾರ್ ಪೊಲಿಪು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೂರಿ ಶೆಟ್ಟಿ ಕಾಪು, ಬ್ರಹ್ಮಲಿಂಗೇಶ್ವರ ಕನ್‌ಸ್ಟ್ರಕ್ಷನ್ ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ನಿಧಿ ಕನ್‌ಸ್ಟ್ರಕ್ಷನ್ ನ ಸಂತೋಷ್ ಶೆಟ್ಟಿ ತೆಂಕರ ಗುತ್ತು ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮತ್ತು ಬಳಗ, ಸಂದೇಶ ನೀರುಮಾರ್ಗ ಮತ್ತು ಬಳಗ ಮಂಗಳೂರು ಇವರಿಂದ ಭಜನಾ ಸಂಕೀರ್ತನೆ ನಡೆಯಿತು ಹಾಗೂ ಶ್ರೀ ಗುರು ನರಸಿಂಹ ದಶಾವತಾರ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ದಕ್ಷ ಯಜ್ಞ ರಾಜಾ ರುದ್ರ ಕೋಪ ಎಂಬ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಿತು.ಈ ಸಂದರ್ಭದಲ್ಲಿ ಗುರ್ಮೆ ಫೌಂಡೇಶನ್ ಟ್ರಸ್ಟಿಗಳಾದ ಹರೀಶ್ ಪಿ ಶೆಟ್ಟಿ ಗುರ್ಮೆ, ಸತೀಶ್ ಶೆಟ್ಟಿ ಗುರ್ಮೆ,ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ, ಪೆಯ್ಯಾರು ಶಿವರಾಮಶೆಟ್ಟಿ ದಾಮೋದರ ಶರ್ಮಾ, ಮತ್ತು ನಿತೇಶ್ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.