ಪ್ರಮೋದ್ ಮಧ್ವರಾಜ್ ಪಕ್ಷಾಂತರ ಮಾಡುವುದರಲ್ಲಿ ಎತ್ತಿದ ಕೈ: ಕುಯಿಲಾಡಿ
ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯ ವದಂತಿ ಇದ್ದು ಈ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಪಕ್ಷದಲ್ಲಿ ಸದ್ಯಕ್ಕೆ ಯಾವುದೇ ಗೇಟ್ ಓಪನ್ ಇಲ್ಲ. ಪ್ರಮೋದ್ ಮಧ್ವರಾಜ್ ರವರು ಪಕ್ಷಾಂತರ ಮಾಡುವುದರಲ್ಲಿ ಎತ್ತಿದ ಕೈ. ಜೆಡಿಎಸ್ ಗೆ ಪಕ್ಷಾಂತರಗೊಂಡು ಇದೀಗ ಕಾಂಗ್ರೆಸ್ ನಲ್ಲಿ ಇದ್ದೂ ಇಲ್ಲದಂತೆ ಇದ್ದಾರೆ. ಅವರ ಸ್ವಂತ ರಾಜಕೀಯ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಬಿಜೆಪಿಗೆ ಬರುವುದಾದರೆ ಜಿಲ್ಲಾ ಬಿಜೆಪಿಯ ಸಹಮತವಿಲ್ಲ. ಈ ಬಗ್ಗೆ ರಾಜ್ಯ ಬಿಜೆಪಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಅವರು ಕಾಲ ಕಾಲಕ್ಕೆ ಅವರ ರಾಜಕೀಯ ಲಾಭಕ್ಕಾಗಿ ಬಿಜೆಪಿ ಹೆಸರನ್ನು ಬಳಸಿಕೊಳ್ಳುವುದು ತರವಲ್ಲ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.