2025ಕ್ಕೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ: ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಿಶ್ರ

ಮಂಗಳೂರು,ಫೆ.21: 2025ರ ಹೊತ್ತಿಗೆ ಎಲ್ಲಾ ಕಡೆಗಳಲ್ಲಿಯೂ ಕೂಡ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸ ಲಾಗುವುದು. ಈ ಮಹಾತ್ವಾಂಕ್ಷೆಯ ಯೋಜನೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‍ಕುಮಾರ್ ಮಿಶ್ರಾ ಹೇಳಿದರು.

ಅವರು ಫೆ.21ರ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಹೆಚ್.ಎಂ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ರೈತರೊಬ್ಬರು ಅನೇಕ ಕಡೆಗಳಲ್ಲಿ ಪಂಪ್‍ಸೆಟ್‍ಗಳಲ್ಲಿ ಮೀಟರ್ ರೀಡಿಂಗ್ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಸಾರ್ವಜನಿಕರು ಇದಕ್ಕಾಗಿ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು. ಮೆಸ್ಕಾಂ 4 ಜಿಲ್ಲೆ 29 ತಾಲೂಕು ಸೇರಿದಂತೆ 61.55 ಲಕ್ಷ ಜನರನ್ನು ತಲುಪಿದೆ. ಆ ಮೂಲಕ ಒಳ್ಳೆಯ ಸೇವೆಯನ್ನು ಜನರಿಗೆ ನೀಡುತ್ತಿದೆ. ಸಾರ್ವಜನಿಕರ ಎಲ್ಲಾ ಸಮಸ್ಯೆ ಗಳನ್ನು ಪರಿಹರಿಸುವಲ್ಲಿ ಗಮನ ನೀಡುತ್ತಿದ್ದೇವೆ ಎಂದರು. ಬೆಳಕು ಯೋಜನೆಯ ಮೂಲಕ ವಿದ್ಯುತ್ ಸಂಪರ್ಕ ವಿಲ್ಲದ ಮನೆಗಳನ್ನು ಹುಡುಕಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದಾಯದ ಪ್ರಮುಖ ಮೂಲಗಳಾದ ಆಸ್ಪತ್ರೆಗಳು, ಕೈಗಾರಿಕೆ, ವಾಣಿಜ್ಯೋದ್ಯಮ, ಕೃಷಿ ಚಟುವಟಿಕೆಗಳಿಗೆ, ಐಸ್‍ಪ್ಲಾಂಟ್ ಉತ್ಪಾದನಾ ಘಟಕ ಸೇರಿದಂತೆ ಉದ್ಯಮಿಗಳಿಗೆ ಹೊರೆಯಾಗದಂತೆ ನೂತನ ಯೋಜನೆಗಳನ್ನು ತಯಾರಿಸಿದ್ದು ಆದಷ್ಟು ಬೇಗ ಜಾರಿಗೊಳಿಸುತ್ತೆವೆ ಎಂದು ತಿಳಿಸಿದರು.

ಅವೈಜ್ಞಾನಿಕ ವಿದ್ಯುತ್ ಸಂರ್ಪಕದಿಂದಾಗಿ ಪ್ರಾಣಿ ಪಕ್ಷಿಗಳ ಸಾವಾಗುತ್ತಿವೆ ಇದರ ಬಗ್ಗೆಯೂ ಕೂಡ ಕ್ರಮ ಕೈಗೊಳ್ಳ ಲಾಗುವುದು ಎಂದರು. ಆದಾಯ ಹೆಚ್ಚಳ ಮತ್ತು ಜನರ ಏಳಿಗೆಯ ಉದ್ದೇಶದಿಂದ ಪುತ್ತೂರು ವಿಭಾಗದ ಗುತ್ತಿಗಾರು ಹಾಗೂ ಉಡುಪಿ ವಿಭಾಗದ ಮಲ್ಪೆ ಸೇರಿದಂತೆ ನಗರದ ಹಲವೆಡೆಗಳಲ್ಲಿ ನೂತನ ಉಪ ವಿದ್ಯುತ್ ಸ್ಟೇಷನ್‍ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು. ವಿದ್ಯುತ್ ಜಾಲದ ಉನ್ನತಿಕರಣ ಮತ್ತು ಬಲವರ್ಧನೆಗಾಗಿ ತೀರ್ಥಹಳ್ಳಿ,ಉಡುಪಿ, ಸೊರಬ ತಾಲೂಕಿನ ಉಳವಿಯಲ್ಲಿ ಕೆಪಿಟಿಸಿಎಲ್‍ನ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದರು. ಗ್ರಾಹಕರಿಗಾಗಿ 24 ಗಂಟೆಯೊಳಗೆ ವಿದ್ಯುತ್ ಪರಿವರ್ತಕಗಳ ಬದಲಾವಣೆ, ಶೀಘ್ರ ಸೇವೆ, ನನ್ನ ಮೆಸ್ಕಾಂ ಆಪ್ ಸೇರಿದಂತೆ ಹಲವು ನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಸಾರ್ವಜನಿಕರು ಮತ್ತು ಇತರೆ ಕೈಗಾರಿಕೋದ್ಯಮಿಗಳು, ರೈತರ ಸಮಸ್ಯೆಗಳನ್ನು ಆಲಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅದ್ಯಕ್ಷರಾದ ಹೆಚ್.ಎಂ ಮಂಜುನಾಥ್ ಅವರು ನಂತರ ಮಾತನಾಡಿ  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಜನಪರ ಕೆಲಸಗಳನ್ನು ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಜನರಿಗೆ ತಲುಪಬೇಕಾದ ಎಲ್ಲಾ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸಲು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಧಿಕಾರಿಗಳಿಗೆ ನಿಷ್ಠೆಯಿಂದ ಕರ್ತವ್ಯವನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಸರಬರಾಜಿನ ವಿಷಯದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದರೂ ಕೂಡ ಅದನ್ನು ತ್ವರಿತಗತಿಯಲ್ಲಿ ನೀಗಿಸಲು ಆಯೋಗದ ಆದೇಶದಂತೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತವು ಸದಾಸಿದ್ದ ವಾಗಿದೆ ಆದರೆ ವ್ಯವಸ್ಥೆಯು ಸಮರ್ಪಕವಾಗಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗುವಂತೆ ಮತ್ತು ಗೃಹ ಬಳಕೆಗೆ ಹೊರೆಯಾಗದ ರೀತಿಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುವುದು, ಐಸ್‍ಪ್ಲಾಂಟ್‍ಗಳು ಗಣನೀಯವಾಗಿ ಇಳಿಕೆಯ ಹಾದಿ ಹಿಡಿಯುತ್ತಿರುವುದಕ್ಕೆ ವಿದ್ಯುತ್‍ದರ ಏರಿಕೆ ಕಾರಣ ಎಂಬುದನ್ನು ಮನಗಂಡಿದ್ದೇವೆ, ಆದ್ದರಿಂದ ಅವರಿಗೂ ಕೂಡ ಸೂಕ್ತ ಸೌಲಭ್ಯ ಜಾರಿ ಗೊಳಿಸಿ ಮೀನುಗಾರಿಕೆ ಸೇರಿದಂತೆ ಇತರೆ ಉದ್ಯಮಗಳಿಗೆ ವಿದ್ಯುತ್ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ನಗರ ಪಂಚಾಯತ್ ಸೇರಿದಂತೆ ಇತರೆ ಇಲಾಖೆಗಳಲ್ಲಿ ವಿದ್ಯುತ್ ಪೋಲಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಹಾಗೂ ಬೀದಿ ದೀಪಗಳ ಸಮರ್ಪಕ ಬಳಕೆಯಿಂದ ವಿದ್ಯುತ್ ಸಂಪನ್ಮೂಲ ಉಳಿಸಬೇಕು ಎಂದು ಕರೆ ನೀಡಿದರು. ಸಣ್ಣ ಕೈಗಾರಿಕೆಗಳ ಪರವಾಗಿ ನಝೀರ್ ಮಾತನಾಡಿ, ದರ ಏರಿಕೆ ಯಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗುತ್ತಿದೆ, ವಿದ್ಯುತ್ ದರವನ್ನು ಇಳಿಸುವಂತೆ ಮನವಿ ಮಾಡಿದರು.
ದೇವದಾಸ್ ಶೆಟ್ಟಿಗಾರ್, ಮಂಜುಗಡ್ಡೆ ಸ್ಥಾವರಗಳು ವರ್ಷದಲ್ಲಿ 9 ತಿಂಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ವಿದ್ಯುತ್ ದರ ಏರಿಕೆಯಿಂದ ಅಪಾರ ಸಮಸ್ಯೆಯಾಗುತ್ತಿದ್ದೆ. ನಮಗೆ ಮೀಟರ್‍ಗೆ 2 ರೂ. ಕಡಿಮೆ ಮಾಡುವಂತೆ ಮನವಿ ಮಾಡಿದರು. ಮಾತ್ರವಲ್ಲ ಮೊದಲು 3 ಕರಾವಳಿ ಜಿಲ್ಲೆಗಳಲ್ಲಿ 510 ಮಂಜುಗಡ್ಡೆ ಸ್ಥಾವರಗಳು ಕಾರ್ಯ ನಿವಹಿಸುತ್ತಿದ್ದವು, ಆದರೆ ಈಗ ಕೇವಲ 126 ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲೂ 25 ಸ್ಥಾವರಗಳು ಮುಚ್ಚುವ ಸ್ಥಿತಿಯಲ್ಲಿ ಇವೆ. ಕೇರಳ, ಗೋವಾದಿಂದ ಬರುವ ಮೀನಿನ ವಾಹನಗಳು ಬರುವಾಗಲೇ ಮಂಜುಗಡ್ಡೆ ಗಳನ್ನು ಲಾರಿಯಲ್ಲಿ ತರುತ್ತಿದ್ದು, ಇದರಿಂದ ಇಲ್ಲಿ ಕಾರ್ಯಚರಿಸುತ್ತಿರುವ ಮಂಜುಗಡ್ಡೆ ಸ್ಥಾವರಗಳಿಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದರು. ಶಿಕ್ಷಕ ರವೀಂದ್ರ ಗುಜ್ಜರಬೆಟ್ಟು ಮಾತನಾಡಿ ಅನೇಕ ಕಡೆಗಳಲ್ಲಿ ಬೀದಿದೀಪಗಳು ಬೆಳಗ್ಗಿನ ಸಮಯದಲ್ಲೂ ಕೂಡ ಉರಿಯುತ್ತಿರುತ್ತವೆ. ಇದರಿಂದಾಗಿ ಅಪಾರ ವಿದ್ಯುತ್ ಶಕ್ತಿ ನಷ್ಟವಾಗುತ್ತಿದೆ, ಇದನ್ನು ತಡೆಯಲು ಟೈಮರ್, ಸೋಲರ್, ಐಪಿ ಸೆಟ್‍ಗಳನ್ನು ಅಳವಡಿಸುವುದರಿಂದ ವಿದ್ಯುತ್ ಅಪವ್ಯಯವನ್ನು ತಡೆಯ ಬಹುದು ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಆಯೋಗದ ಸದಸ್ಯರಾದ ಎಂ.ಡಿ.ರವಿ ಅವರು ನಿಮ್ಮ ವ್ಯಾಪ್ತಿಯಲ್ಲಿ ಬರುವ ಪಂಚಾಯತ್‍ಗಳಿಗೆ ತೆರಳಿ ಅಲ್ಲಿ ಪಿಡಿಓಗಳೊಂದಿಗೆ ಮಾತನಾಡಿ ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಸಲಹೆ ನೀಡಿದರು. ಈಗಾಗಲೇ ಎಲ್ಲಾ ಕಡೆಗಳಿಗೆ ಟೈಮರ್ ಹಾಗೂ ಐಪಿ ಸೆಟ್‍ಗಳನ್ನು ಅಳವಡಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು. ಸಾರ್ವಜನಿಕರು, ಕೈಗಾರಿಕೋದ್ಯಮಿಗಳು, ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!