ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರಿಗಳನ್ನು ನೇಮಿಸಿ-ಬ್ಲಾಕ್ ಕಾಂಗ್ರೆಸ್ ಮನವಿ

ಉಡುಪಿ ಫೆ.21 (ಉಡುಪಿ ಟೈಮ್ಸ್ ವರದಿ): ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣಾವಧಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ಇಂಜಿನಿಯರ್ ಅವರನ್ನು ನೇಮಿಸುವ ಕುರಿತು ಉಡುಪಿ ಜಿಲ್ಲಾಧಿಕಾರಿಯವರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಸಲ್ಲಿಸಿರುವ‌ ಮನವಿಯಲ್ಲಿ, ಕೋವಿಡ್ ಲಾಕ್ ಡೌನ್‌ನಿಂದಾದ ಸಮಸ್ಯೆಗಳು, ಮರಳಿನ ಸಮಸ್ಯೆಗಳಿಂದ ಕೊಂಚ ಚೇತರಿಕೆ ಕಂಡಿದ್ದ ಕಟ್ಟಡ ನಿರ್ಮಾಣ, ಕಾರ್ಮಿಕರು ಮತ್ತು ಉಡುಪಿಯ ಜನತೆ ಈಗ ಕಟ್ಟಡ ಸಾಮಾಗ್ರಿಗಳ ಅತೀ ಬೆಲೆ ಏರಿಕೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತುಂಡು ಭೂಮಿಯನ್ನು ಸ್ವಂತ ಮನೆ ನಿರ್ಮಿಸಲು ಖರೀದಿಸಿ ಭೂ ಪರಿವರ್ತನೆ, ಏಕನಿವೇಶನ, ಇ ಖಾತಾ ಮತ್ತು ಕಟ್ಟಡ ಪರವಾನಿಗೆಗೆ ಅನುವುಗೊಳಿಸುವಲ್ಲಿ ಜನತೆ ಕಂದಾಯ ಇಲಾಖೆ ಸುತ್ತುವಂತಾಗಿದೆ. ಈ ಎಲ್ಲಾ ಕಾರ್ಯಗಳಿಗೂ ಕಂದಾಯ ಇಲಾಖೆಯ ಎಲ್ಲಾ ವಿಭಾಗಕ್ಕೆ ಕೊಂಡಿ ಅಥವಾ ಸೇತುವೆಯಂತೆ ಕೆಲಸಮಾಡುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿಗೆ ಕಳೆದ ಒಂದು ತಿಂಗಳಿಂದ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ಇಂಜಿನಿಯರ್ ಇಲ್ಲದಿರುವುದರಿಂದ ಸಮಸ್ಯೆಯು ಮತ್ತಷ್ಟು ಉಲ್ಬಣಗೊಂಡಿದೆ.

ಭೂಪರಿವರ್ತನೆಗೆ ನಿರಕ್ಷೇಪಣಾ ಪತ್ರ, ಏಕನಿವೇಶನ, ವಲಯ ಪ್ರಮಾಣ ಪತ್ರ, ಧೃಡೀಕೃತ ನಕಲುಗಳು ಹಾಗೂ ಕಟ್ಟಡ ಪರವಾನಿಗೆಗಳಿಗೆ ಅರ್ಜಿಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈಗಾಗಲೇ ತುಂಬಿಹೋಗಿರುತ್ತವೆ. ಇದರಿಂದಾಗಿಯೇ ಕಟ್ಟಡ ನಿರ್ಮಾಣ ಅಥವಾ ಸ್ಥಿರಾಸ್ತಿಗಳ ನೊಂದಣಿಯ ಕೆಲಸಕಾರ್ಯಗಳು ಆಸಾಧ್ಯವಾಗುತ್ತದೆ.
ಸರಕಾರದ ಬೊಕ್ಕಸಕ್ಕೆ ಇವೆಲ್ಲಾ ಕೆಲಸಕಾರ್ಯಗಳಿಂದ ಬರುವ ಆದಾಯವನ್ನು ಮತ್ತು ಉಡುಪಿ ಜನತೆಯ ಈ ಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣಾವಧಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ಇಂಜಿನಿಯರ್ ಗಳನ್ನು ಕೂಡಲೇ ನೇಮಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಜತ್ತನ್ನ, ಯತೀಶ್ ಕರ್ಕೇರ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಕಡೆಕಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ, ಸದಸ್ಯ ಸುಕನ್ಯಾ ಪೂಜಾರಿ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯ ಶರತ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಡಿಯೋನ್ ಡಿ’ಸೋಜಾ, ಮಾಜಿ ನಗರಸಭಾ ಸದಸ್ಯ ನಾರಾಯಣ್ ಕುಂದರ್ ಕಲ್ಮಾಡಿ, ಗಣೇಶ್ ನೆರ್ಗಿ, ಗಣೇಶ್ ದೇವಾಡಿಗ, ಸತೀಶ್ ಕೊಡವೂರು, ಸತೀಶ್ ಕುಮಾರ್ ಮಂಚಿ, ಲಕ್ಷ್ಮೀಶ್ ಶೆಟ್ಟಿ, ಸತೀಶ್ ಪೂಜಾರಿ ಬನ್ನಂಜೆ, ಸಾಯಿರಾಜ್ ಕಿದಿಯೂರು, ಪ್ರಮೀಳಾ ಸುವರ್ಣ, ಪ್ರಶಾಂತ್ ಶೆಟ್ಟಿ ದೊಡ್ಡಣಗುಡ್ಡೆ ಹಾಗೂ ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!