ಉಡುಪಿ: ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ- ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. 

ದೇಶದ್ರೋಹದ ಹೇಳಿಕೆ ನೀಡಿರುವ ಈಶ್ವರಪ್ಪರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ತ್ರಿವರ್ಣ ಧ್ವಜ ನಮ್ಮ ದೇಶದ ಸ್ವಾತಂತ್ರ್ಯ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನಗಳ ಸಂಕೇತ. ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದಿರುವುದು ದೇಶ ವಿರೋಧಿಯಾಗಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ವಿಚಾರಗಳನ್ನು ಮತ್ತು ರಾಷ್ಟ್ರ ಲಾಂಛನಗಳಿಗೆ ಮಾಡಿರುವ ಅಪಮಾನವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಹೀಗಾಗಿ ಈಶ್ವರಪ್ಪರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಿ, ಅವರ ವಿರುದ್ಧ ಸೂಕ್ತ ಕಾನೂನು‌ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕುಶಾಲ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉದ್ಯಾವರ ನಾಗೇಶ್ ಕುಮಾರ್, ಶಬ್ಬೀರ್ ಅಹಮದ್, ಹರೀಶ್ ಶೆಟ್ಟಿ ಪಾಂಗಳ, ಕೀರ್ತಿ  ಶೆಟ್ಟಿ, ಪ್ರಶಾಂತ್ ಜತ್ತನ್ನ, ಯತೀಶ್ ಕರ್ಕೇರ, ರಮೇಶ್ ಕಾಂಚನ್, ಮುರಳಿ ಶೆಟ್ಟಿ, ಗಣೇಶ್ ನೆರ್ಗಿ, ಗೋಪಾಲಕೃಷ್ಣ ಶೆಟ್ಟಿ, ಲಕ್ಷ್ಮಣ ಪೂಜಾರಿ, ವಿಜಯ ಪೂಜಾರಿ, ಉಪೇಂದ್ರ ಮೆಂಡನ್, ನಾರಾಯಣ್ ಕುಂದರ್, ವತ್ಸಲಾ ವಿನೋದ್, ಸುರೇಶ್ ಕುಮಾರ್, ಪ್ರಶಾಂತ್ ಪೂಜಾರಿ, ಸತೀಶ್ ಮಂಚಿ, ಲಕ್ಷ್ಮಣ ಶೆಟ್ಟಿ, ಸೂರಜ್ ಕಲ್ಮಾಡಿ, ಸಾಯಿರಾಜ್, ಡಿಯೋನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!