ಬಿಜೆಪಿ-ಸಂಘಪರಿವಾರದ ದುಷ್ಕರ್ಮಿಗಳಿಂದ ಹಿಂಸಾಚಾರ: ಪೊಲೀಸರ ನಿಷ್ಕ್ರಿಯತೆಗೆ ಪಿಎಫ್’ಐ ಆಕ್ರೋಶ
ಶಿವಮೊಗ್ಗ: ನಗರದಲ್ಲಿ ಬಿಜೆಪಿ-ಸಂಘಪರಿವಾರದ ದುಷ್ಕರ್ಮಿಗಳು ವ್ಯಾಪಕ ಹಿಂಸಾಚಾರದಲ್ಲಿ ತೊಡಗಿದ್ದು, ಈ ವೇಳೆ ದುಷ್ಕೃತ್ಯ ತಡೆಯಲು ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ನಿಷ್ಕ್ರಿಯತೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಯ್ಯದ್ ರಿಝ್ವಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಸಣ್ಣಪುಟ್ಟ ಘಟನೆಗಳು ನಡೆದರೂ ಬಿಜೆಪಿ-ಸಂಘಪರಿವಾರವು ಕೋಮು ಲೇಪ ನೀಡಿ ಅದನ್ನು ತನ್ನ ರಾಜಕೀಯ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿರುವುದು ಪ್ರವೃತ್ತಿಯಾಗಿ ಬಿಟ್ಟಿದೆ. ಈ ಹಿಂದೆ ಜಿಲ್ಲೆಯಲ್ಲಿ ಹಿಂದು ಯುವಕನೊಬ್ಬನ ಕೊಲೆ ನಡೆದಾಗ ಬಿಜೆಪಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಿ ವ್ಯಾಪಕವಾಗಿ ದ್ವೇಷವನ್ನು ಹರಡಿತು. ಆದರೆ ಆ ಕೊಲೆ ಕೌಟುಂಬಿಕ ಕಲಹದಿಂದ ನಡೆದಿತ್ತು ಎಂಬುದನ್ನು ಪೊಲೀಸ್ ತನಿಖೆ ಬಹಿರಂಗಪಡಿಸಿತ್ತು. ಅಷ್ಟೊತ್ತಿಗಾಗಲೇ ಸಂಘಪರಿವಾರ ಕಿಡಿಗೇಡಿಗಳು ಮುಸ್ಲಿಮರ ಅಂಗಡಿ, ಮನೆ, ವಾಹನಗಳಿಗೆ ಬೆಂಕಿ ಹಚ್ಚಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿತ್ತು. ಇದೀಗ ನಗರದಲ್ಲಿ ನಡೆದಿರುವ ಕೊಲೆ ಪ್ರಕರಣದ ವಿಚಾರಣೆ ತನಿಖೆಯ ಹಂತದಲ್ಲಿರುವಾಗಲೇ ಸಚಿವ ಈಶ್ವರಪ್ಪನವರು ಅದನ್ನು ಮುಸ್ಲಿಮರ ತಲೆಗೆ ಕಟ್ಟಿ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸಿದ್ದಾರೆ.
ಈಗಾಗಲೇ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಈಶ್ವರಪ್ಪನವರು ಈ ಘಟನೆಗೆ ಕೋಮು ಬಣ್ಣ ಹಚ್ಚಿ ಪಾರಾಗುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಸಂಘಪರಿವಾರದ ದುಷ್ಕರ್ಮಿಗಳು ಯಾವುದೇ ನಿಯಂತ್ರಣ ವಿಲ್ಲದೆ ಸ್ವಚ್ಛಂದವಾಗಿ ವಿಹರಿಸುತ್ತಾ ಮುಸ್ಲಿಮರ ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಆರಾಧನಾ ಸ್ಥಳಕ್ಕೆ ಹಾನಿ ಉಂಟು ಮಾಡಿದ್ದಾರೆ. ಕೆಲವೊಂದು ಕಡೆ ಪೊಲೀಸರ ಉಪಸ್ಥಿತಿಯಲ್ಲೇ ದುಷ್ಕೃತ್ಯಗಳು ನಡೆದಿರುವುದು ಆತಂಕಕಾರಿಯಾಗಿದೆ.
ಮುಸ್ಲಿಮ್ ವಿರೋಧಿ ಭಾವನೆ ಕೆರಳಿಸಿ ದುಷ್ಕೃತ್ಯಗಳಿಗೆ ಪ್ರಚೋದನೆ ನೀಡಿದ ಸಚಿವ ಈಶ್ವರಪ್ಪರ ವಿರುದ್ಧ ಪ್ರಕರಣ ದಾಖಲಿಸಬೇಕು. ವ್ಯಾಪಕ ಹಿಂಸಾಚಾರದಲ್ಲಿ ತೊಡಗಿರುವ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಪೊಲೀಸರು ಪಾರದರ್ಶಕ ಮತ್ತು ನಿಷ್ಪಕ್ಷ ಪಾತ ತನಿಖೆಯ ಮೂಲಕ ಕೊಲೆ ಪ್ರಕರಣದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂದು ಸಯ್ಯದ್ ರಿಝ್ವಾನ್ ಆಗ್ರಹಿಸಿದ್ದಾರೆ.