ಭಜರಂಗದಳ ಕಾರ್ಯಕರ್ತನ ಹತ್ಯೆ: ಓರ್ವ ವಶಕ್ಕೆ?
ಶಿವಮೊಗ್ಗ: ಹಿಂದೂ ಭಜರಂಗದಳ ಕಾರ್ಯಕರ್ತ 23 ವರ್ಷದ ಯುವಕ ಹರ್ಷನ ಕೊಲೆ ಪ್ರಕರಣದದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ಬಂಧನ ಮೂಲಕ ಕೊಲೆ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ, ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ, ಕೊಲೆಗೂ ಹಿಜಾಬ್ ವಿವಾದಕ್ಕೂ ಏನಾದರೂ ಸಂಬಂಧ ಇದೆಯೇ ಹೀಗೆ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಒಬ್ಬ ಆರೋಪಿಯನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ನಿನ್ನೆ ರಾತ್ರಿ ಕಾರಿನಲ್ಲಿ ಬಂದು ಕೊಲೆ ಮಾಡಿ ಆಟೋದಲ್ಲಿ ಪರಾರಿಯಾಗಿದ್ದರು.
ಇಂದು ಬೆಳಗ್ಗೆ ಹರ್ಷನ ಶವ ಇರುವ ಮೆಗ್ಗಾಂವ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೊಲೆ ಆರೋಪಿಗಳ ಸುಳಿವು ಸಿಕ್ಕಿದ್ದು, ಕೂಡಲೇ ಬಂಧಿಸಲಾಗುವುದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಜನರು ಶಾಂತರೀತಿಯಿಂದ ವರ್ತಿಸಬೇಕೆಂದು ಕೋರಿದ್ದರು.