ಮುಂಬೈ: ಶಾಲೆಗಳಲ್ಲಿ ‘ಗಾಯತ್ರಿ ಮಂತ್ರ ಪಠಣ’ಕ್ಕೆ ಬಿಜೆಪಿ ಒತ್ತಾಯ

ಮುಂಬೈ: ಹಿಜಾಬ್ ವಿವಾದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂ ತೆಯೇ, ಇದೀಗ ಮಹಾರಾಷ್ಟ್ರದ ಮುಂಬೈನಲ್ಲಿ ಬಿಎಂಸಿ ಶಾಲೆಗಳಲ್ಲಿ ಗಾಯತ್ರಿ ಮಂತ್ರಿ ಮತ್ತು ಭಗವದ್ಗೀತೆ ಪಠಣಕ್ಕೆ ಬಿಜೆಪಿ ಒತ್ತಾಯಿಸಿದೆ. 

ಭಗವದ್ಗೀತೆ ಪ್ರತಿಯೊಬ್ಬರಿಗೂ ಜೀವನ ಪಾಠವಾಗಿದೆ ಎಂದು ಬಿಜೆಪಿ ಕಾರ್ಪೊರೇಟರ್ ಯೋಗಿತಾ ಕೋಲಿ ಹೇಳಿದ್ದಾರೆ. “ವಿದ್ಯಾರ್ಥಿಗಳು ತಮ್ಮ ಚಿಕ್ಕ ವಯಸ್ಸಿನಲ್ಲಿ ಭಗವದ್ಗೀತೆ ಓದಲು ಪ್ರಾರಂಭಿಸಿದರೆ, ಅವರು ನಮ್ಮ ದೇಶದ ಉತ್ತಮ ಮತ್ತು ಸುಸಂಸ್ಕೃತ ನಾಗರಿಕರಾಗುತ್ತಾರೆ. ಗೀತೆಯು ಹಿಂದೂ ಧರ್ಮದಲ್ಲಿ ಪವಿತ್ರ ಗ್ರಂಥವಾಗಿದೆ ಮತ್ತು ಇತರ ಧರ್ಮೀಯರು ಸಹ ಅದನ್ನು ಓದುತ್ತಾರೆ. ವಿಶ್ವ ವಿದ್ವಾಂಸರೂ ಈ ಧಾರ್ಮಿಕ ಗ್ರಂಥದ ಮಹತ್ವವನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ವಾಸ್ತವವಾಗಿ, ನ್ಯಾಯಾಲಯಗಳಲ್ಲಿ, ಪ್ರಮಾಣವಚನ ಸ್ವೀಕರಿಸಲು ಮತ್ತು ಸತ್ಯವನ್ನು ಮಾತ್ರ ಹೇಳಲು ಭಗವದ್ಗೀತೆ ಯನ್ನು ಬಳಸಲಾಗುತ್ತದೆ. ಬಿಎಂಸಿ ಶಾಲೆಯ ವಿದ್ಯಾರ್ಥಿಗಳು ಅವುಗಳನ್ನು ಓದಲು ಪ್ರಾರಂಭಿಸಿದರೆ, ಜೀವನದಲ್ಲಿ ಸವಾಲುಗಳನ್ನು ಧೈರ್ಯದಿಂದ ಮತ್ತು ಯಾವುದೇ ಭಯವಿಲ್ಲದೆ ಎದುರಿಸುವುದು ಹೇಗೆ ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕೋಲಿ ಹೇಳಿದರು.

ಬಿಜೆಪಿಯ ಮತ್ತೋರ್ವ ಹಿರಿಯ ಮುಖಂಡ ಭಾಲಚಂದ್ರ ಶಿರ್ಸಾತ್ ಮಾತನಾಡಿ, ಶಾಲೆಗಳಲ್ಲಿ ಗಾಯತ್ರಿ ಮಂತ್ರ ಮತ್ತು ಭಗವದ್ಗೀತೆಯ ಪಠಣ ಕಡ್ಡಾಯವಾಗಿರಬೇಕು. ಇವು ಕೇವಲ ಧಾರ್ಮಿಕ ಗ್ರಂಥಗಳಲ್ಲ ಆದರೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಐರೋಪ್ಯ ರಾಷ್ಟ್ರಗಳಲ್ಲಿಯೂ ತಾತ್ವಿಕ ಅಧ್ಯಯನಗಳು ಅವರ ಶಾಲಾ ಪಠ್ಯಕ್ರಮದ ಭಾಗವಾಗಿದೆ ಎಂದು ಹೇಳಿದರು.

ಸಮಾಜವಾದಿ ಪಕ್ಷದ ನಾಯಕ ಮತ್ತು ಶಾಸಕ ರಯೀಸ್ ಶೇಖ್ ಬಿಜೆಪಿಯ ಬೇಡಿಕೆಯನ್ನು ವಿರೋಧಿಸಿದರು.ಬಿಎಂಸಿ ಚುನಾವಣೆಗೆ ಮುನ್ನ ಮತದಾರರನ್ನು ಧ್ರುವೀಕರಿಸುವ ಉದ್ದೇಶದಿಂದ ಬಿಜೆಪಿಯ ಬೇಡಿಕೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!