ಅಂಬಲಪಾಡಿ: ಭೂತ-ಪ್ರೇತಾತ್ಮ ವದಂತಿ ಹಬ್ಬಿಸಿದ ಓರ್ವ ವಶಕ್ಕೆ- ಐವರು ಪರಾರಿ
ಉಡುಪಿ ಫೆ.20: ನಗರದ ಅಂಬಲಪಾಡಿ ಬಬ್ಬುಸ್ವಾಮಿ ದೇವಸ್ಥಾನ ಬಳಿ ಭೂತ, ಪ್ರೇತಾತ್ಮ ಇದೆ ಎಂಬ ವದಂತಿಗೆ ಸಂಬಂಧಿಸಿ,ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ಪ್ರೇತಾತ್ಮದ ಹಾಗೆ ಜೋರಾಗಿ ಕೂಗಿ ಸ್ಥಳೀಯರನ್ನು ಹೆದರಿಸುತ್ತಿದ್ದ ಓರ್ವನನ್ನು ಸ್ಥಳೀಯರು ವಶಕ್ಕೆ ಪಡೆದಿದ್ದು ಕೆಲವರು ಪರಾರಿಯಾಗಿದ್ದಾರೆ.
ಆರು ಮಂದಿ ಯುವಕರ ತಂಡ ಕಾಡಿನಲ್ಲಿ ರಾತ್ರಿ ಹೊತ್ತು ಪ್ರೇತಾತ್ಮದ ಹಾಗೆ ಬೊಬ್ಬೆ ಹಾಕಿ ಕೆಲವು ದಿನಗಳಿಂದ ಜನರನ್ನು ಹೆದರಿಸುತ್ತಿದ್ದರು. ನಿನ್ನೆ ರಾತ್ರಿ ಅಲ್ಲಿಯ ಸ್ಥಳೀಯರು ಆ ಯುವಕರನ್ನು ಬೆನ್ನಟ್ಟಿ ಥಳಿಸಿದ್ದು, ಈ ಪೈಕಿ ಓರ್ವನನ್ನು ವಶಕ್ಕೆ ಪಡೆದಿದ್ದು ಐವರು ಪರಾರಿಯಾಗಿದ್ದಾರೆ.
ವಶಕ್ಕೆ ಪಡೆದ ಯುವಕನನ್ನು ಸ್ಥಳೀಯರು ಉಡುಪಿ ನಗರ ಠಾಣೆಗೆ ಒಪ್ಪಿಸಿದ್ದಾರೆ. ಕೆಲವು ದಿನಗಳಿಂದ ಈ ಪರಿಸರದಲ್ಲಿ ಭೂತ,ಪ್ರೇತಾತ್ಮ ಇದೆ ಎಂದು ಮತ್ತು ರಾತ್ರಿ ಹೊತ್ತಿನಲ್ಲಿ ಹೆಣ್ಣಿನ ಧ್ವನಿಯಲ್ಲಿ ಶಬ್ದ ಜೋರಾಗಿ ಕೇಳಿ ಬರುತ್ತಿತ್ತು ಎಂಬ ವಿಚಾರ ಎಲ್ಲೆಡೆ ಹಬ್ಬಿ ಬಾರೀ ಸುದ್ಧಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಯಾವುದೋ ಒಂದು ಶಕ್ತಿ ಇದೆ ಎಂಬ ವದಂತಿ ಹರಡಿತ್ತು. ಮಾತ್ರವಲ್ಲದೆ ಅಲ್ಲಿ ಸ್ಮಶಾನ ಕಾಳಿ ಎಂಬ ಶಕ್ತಿ ಇದೆ ಎಂದೂ ಹೇಳಲಾಗುತ್ತಿತ್ತು. ಅಲ್ಲಿ ರಾತ್ರಿ ಹೊತ್ತು ತಾಯಿ ಮಗಳ ಧ್ವನಿಯಲ್ಲಿ ಶಬ್ದ ಕೇಳಿಬರುತ್ತಿತ್ತು.ಆ ಧ್ವನಿ ಕೇಳಿ ಕೆಲವರು ಹೆದರಿದ ಘಟನೆ ಕೂಡಾ ನಡೆದಿತ್ತು.ಆದರೆ ಅದು ಯಾರಿಗೂ ತೊಂದರೆ ನೀಡಿಲ್ಲ ಎಂದು ಊರಿನವರು ಹೇಳುತ್ತಾರೆ.
ಈ ವಿಚಾರ ತಿಳಿದ ಕೆಲವು ಯುವಕರು ಕೆಲವು ದಿನಗಳಿಂದ ಬೊಬ್ಬೆ ಹಾಕಿ ಜನರನ್ನು ಹೆದರಿಸುತ್ತಿದ್ದರು. ಇದನ್ನು ಪತ್ತೆ ಮಾಡಬೇಕೆಂದು ಸ್ಥಳೀಯರು ಎಲ್ಲಾ ಸೇರಿ ಆ ಪುಂಡ ಯುವಕರನ್ನು ಪತ್ತೆಹಚ್ಚಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಉಡುಪಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.