ಸಮುದಾಯದ ಏಳಿಗೆಗೆ ವಕ್ಫ್ ಮಂಡಳಿ ಸದಾ ಸಿದ್ದ: ಮಹಮ್ಮದ್ ಶಾಫಿ ಸಅದಿ
ಮಂಗಳೂರು, ಫೆ.19: ಸಮುದಾಯದ ಏಳಿಗೆಗಾಗಿ ವಕ್ಫ್ ಮಂಡಳಿ ಸದಾ ಸಿದ್ದ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಅವರು ಹೇಳಿದರು.
ಅವರು ಫೆ.19ರ ಶನಿವಾರ ನಗರದ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪರಭಾರೆಗೊಂಡಿರುವ ವಕ್ಫ್ ಮಂಡಳಿಯ 94 ಎಕರೆ ಆಸ್ತಿಯನ್ನು ಮರು ಸ್ವಾದೀನ ಪಡಿಸಿ ಕೊಳ್ಳಲು ಕಾನೂನು ಮತ್ತು ಸಂಸದಿಯ ವ್ಯವಹಾರ ಸಚಿವರಾದ ಮಾಧುಸ್ವಾಮಿ ಹಾಗೂ ಕಂದಾಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ, ಆ ಮೂಲಕ ಸಮುದಾಯದ ಏಳಿಗೆಗಾಗಿ ವಕ್ಫ್ ಮಂಡಳಿ ಸರ್ವರೀತಿಯಲ್ಲೂ ಸಿದ್ದವಾಗಿದೆ ಎಂದರು.
ವಕ್ಫ್ ಮಂಡಳಿಗೆ ಹೊಸದಾಗಿ ನೋಂದಾಯಿತವಾಗಿರುವ ಆಸ್ತಿಗಳನ್ನು ನೂತನ ಕಾನೂನಿನಂತೆ ಡ್ರೋನ್‍ಗಳ ಮೂಲಕ ಸರ್ವೆ ಮಾಡಲಾಗುತ್ತಿದೆ. ಇದರಿಂದಾಗಿ ಅಕ್ರಮ ಅವ್ಯವಹಾರಗಳು ನಿಯಂತ್ರಣಕ್ಕೆ ಬರುತ್ತಿದೆ ಮತ್ತು ರಾಜ್ಯದಲ್ಲಿರುವ ಎಲ್ಲಾ ವಕ್ಫ್ ಆಸ್ತಿಗಳಿಗೆ ಪ್ಲಾಗ್ ಆಪ್ ಮಾಡಲು ಕಂದಾಯ ಇಲಾಖೆಯೊಂದಿಗೆ ಚರ್ಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿರುವ ಸಯ್ಯದ್ ಮದನಿ ದರ್ಗಾ ಉಳ್ಳಾಲ, ಕಾಜಿವೂರ್ ದರ್ಗಾ, ಫಾತಿಮಾ ಎಸ್ಟೇಟ್ ಮತ್ತು ಇತರೆ ಪ್ರಮುಖ ಮಸಿದಿಗಳಲ್ಲಿ ನಡೆದಿರುವ ಭೂ ಅವ್ಯವಹಾರಗಳ ಬಗ್ಗೆಯೂ ಸೂಕ್ತ ಕ್ರಮ ಕೈಗೊಂಡು, ಲೆಕ್ಕ ಪರಿಶೋಧನೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ವಕ್ಫ್ ಮಂಡಳಿಯಿಂದ ಬರುವ ಆದಾಯವನ್ನು ಸಮುದಾಯದಲ್ಲಿರುವ ಅತ್ಯಂತ ಬಡ ವಿಧವೆಯರು, ಅನಾಥರು ಮತ್ತು ವಿಕಲಚೇತನರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಕ್ಫ್ ಮಡಳಿಯ ಅದೀನದಲ್ಲಿರುವ ಖಾಲಿ ಜಾಗಗಳಲ್ಲಿ ಶಾಲೆ-ಕಾಲೇಜುಗಳನ್ನು ನಿರ್ಮಿಸಿ ಶಿಕ್ಷಣಕ್ಕೆ ಆಧ್ಯತೆ ನೀಡುವುದರೊಂದಿಗೆ, ಆಸ್ಪತ್ರೆ ಮತ್ತು ವಾಣಿಜ್ಯ ಸಂಕಿರ್ಣಗಳ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಜನರ ಏಳಿಗೆಗಾಗಿ ಕರ್ನಾಟಕ ವಕ್ಫ್ ಮಂಡಳಿಯ 2022-23ನೇ ಸಾಲಿಗೆ ಪ್ರಸ್ತಾಪಿಸಲಾಗಿರುವ ಆಯವ್ಯಯ ಬೇಡಿಕೆ 377.11 ಕೋಟಿಯಾಗಿದ್ದು, ಇದು ಕಳೆದ ಸಾಲಿಗೆ ಹೋಲಿಸಿದರೆ 284 ಕೋಟಿ ಹೆಚ್ಚುವರಿ ಬೇಡಿಕೆಯಾಗಿದೆ ಎಂದರು. ಪ್ರಧಾನಮಂತ್ರಿ ಜನ ವಿಕಾಸ್ ಯೋಜನೆಯಡಿ ಕರ್ನಾಟಕ ವಕ್ಫ್ ಮಂಡಳಿಗೆ ದೊರೆತಿರುವ 75 ಕೋಟಿ ಅನುದಾನ ದಲ್ಲಿ 25 ಕೋಟಿಯನ್ನು ದಕ್ಷಿಣ ಕನ್ನಡದ ಮೂರು ಸಂಸ್ಥೆಗಳಿಗೆ ನೀಡಲಾಗಿದೆ ಜೊತೆಗೆ ಪೇಶ್ ಇನಾಂ ಮತ್ತು ಮೌಜನ್ಸ್‍ಗಳಿಗೆ ಗೌರವಧನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.