ಎಲ್ಲಾ ಜಿಲ್ಲೆಗಳಲ್ಲಿಯೂ ಕಡತ ವಿಲೇವಾರಿ ಅಭಿಯಾನ, ಒತ್ತುವರಿ ಜಮೀನು ಲೀಸ್‍ಗೆ- ಆರ್. ಅಶೋಕ್
ಮಂಗಳೂರು,ಫೆ.19: ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಿನಪೂರ್ತಿ ಅಲ್ಲಿಯೇ ಮೊಕ್ಕಂ ಹೂಡಿ ಬಾಕಿ ಉಳಿದ ಕಡತಗಳ ವಿಲೇವಾರಿ ಅಭಿಯಾನ ನಡೆಸಲಾಗುವುದು ಎಂದು ಕಂದಾಯ ಸಚಿವರಾದ ಆರ್. ಅಶೋಕ್ ಅವರು ಪ್ರಕಟಿಸಿದರು.
ಅವರು ಶನಿವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡತ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಳ್ಳ ಲಾಗಿರುವ ಕಡತ ವಿಲೇವಾರಿ ಅಭಿಯಾನದಿಂದ ಪ್ರೇರಿತರಾದ ಸಚಿವರು, ರಾಜ್ಯಾದ್ಯಂತ ಕಡತ ವಿಲೇವಾರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು, ಸ್ವತಃ ತಾವೇ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ತೆರಳಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಲ್ಲಿನ ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಕಿ ಉಳಿದ ಕಡತಗಳ ಇತ್ಯರ್ಥ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರದಿಂದ ಆಗಬೇಕಾದ ಕೆಲಸ ಕಾರ್ಯಗಳಿಗೆ ಹತ್ತಾರು ವರ್ಷ ಅಲೆದು ಅಲೆದು ಕೆಲಸ ಆಗದೇ ತೀವ್ರ ನಿರಾಸೆಗೊಂಡ ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಲಿದೆ, ಕಡತ ವಿಲೇವಾರಿ ಎಲ್ಲೆಡೆ ನಡೆಯಬೇಕು, ಆಯಾ ಕ್ಷೇತ್ರಗಳ ಶಾಸಕರು ತಾಲೂಕುಗಳಲ್ಲಿ ಒಂದು ದಿನ ಅಥವಾ ಒಂದು ವಾರ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಂಡರೆ ಜನಸಾಮಾನ್ಯರಿಗೆ ಸಾಕಷ್ಟು ಉಪಯೋಗವಾಗುತ್ತದೆ ಎಂದು ಹೇಳಿದರು.
ಕಡತ ವಿಲೇವಾರಿಯಂತಹ ಕಾರ್ಯಕ್ರಮ ಅಭಿಯಾನದಂತೆ ಕೈಗೊಳ್ಳಲಾಗಿದೆ, ಆ ಮೂಲಕ ಜಿಡ್ಡುಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸಲಾಗುತ್ತಿದೆ, ಸರ್ಕಾರದ ಸೌಲಭ್ಯಗಳು ತಲುಪದ ಅಸಹಾಯಕರು ಸಾಕಷ್ಟಿದ್ದಾರೆ, ಅವರಿಗೆ ಸವಲತ್ತುಗಳು ದೊರೆಯಬೇಕು, ವೃದ್ದಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನಕ್ಕಾಗಿ ಅರ್ಹರಿಗೆ ಕೂಡಲೇ ತಲುಪಬೇಕು, ಕಳೆದ ಬಾರಿ ಉಡುಪಿ, ಮಂಗಳೂರಿಗೆ ಭೇಟಿ ನೀಡಿದಾಗ ಮನೆ ಬಾಗಿಲಿಗೆ ಪಿಂಚಣಿ ಯೋಜನೆಯನ್ನು ಆರಂಭಿಸಲಾಯಿತು, ಪಿಂಚಣಿಗಾಗಿ ಅರ್ಹರನ್ನು ಅಲೆದಾಡಿಸಬಾರದು ಎಂಬ ಕಾರಣಕ್ಕೆ ಸರ್ಕಾರದ ಬಳಿಯೇ ಅವರ ದಾಖಲಾತಿಗಳು, ವಿಳಾಸ ಇರುವ ಕಾರಣ ಮನೆ ಬಾಗಿಲಿಗೆ ಪಿಂಚಣಿ ಒದಗಿಸುವ ವ್ಯವಸ್ಥೆ ರೂಪಿಸಲಾಗಿದೆ, ಕಂದಾಯ ಕಾಯ್ದೆಗೆ ತಿದ್ದುಪಡಿ, ಮೂರೇ ದಿನದಲ್ಲಿ ಕನ್ವರ್ಷನ್ ಮಂಜೂರು, ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆಗೆ ಹೀಗೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಒತ್ತುವರಿ ಜಮೀನು ಲೀಸ್‍ಗೆ: ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಒತ್ತುವರಿ ಜಮೀನಿನಲ್ಲಿರುವ ತೋಟ ಗಳನ್ನು 30 ವರ್ಷ ಅವಧಿಗೆ ಕೃಷಿಕರಿಗೆ ಲೀಸ್‍ಗೆ ನೀಡುವ ಚಿಂತನೆ ಇದೆ, ನಡೆಸಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಕುಮ್ಕಿ, ಕಾನ, ಬಾಣೆ ಜಮೀನು ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಬದ್ದವಾಗಿದೆ, ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ, ಕುಮ್ಕಿ ಅಥವಾ ಗೋಮಾಳ ಜಮೀನನ್ನು ಸಂಘಸಂಸ್ಥೆಗಳಿಗೆ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ, ಈ ಜಮೀನನ್ನು ರೈತರಿಗೆ ನೀಡಿ ನ್ಯಾಯ ಒಗದಿಸಲಾಗುವುದು ಎಂದು ತಿಳಿಸಿದರು.
ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಮಾತನಾಡಿ, ಆಡಳಿತ ವ್ಯವಸ್ಥೆಗೆ ಮತ್ತಷ್ಟು ವೇಗ ನೀಡುವ ಮೂಲಕ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳನ್ನು ಒದಗಿಸಿ ಅವರಿಗೆ ನ್ಯಾಯದೊರಕಿಸಿ ಕೊಡುವ ನಿಟ್ಟಿನಲ್ಲಿ ಕಡತ ವಿಲೇವಾರಿಯ ಅಭಿಯಾನ ಎಂಬ ವಿಶೇಷ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯ ಆಡಳಿತಕ್ಕೆ ಮತ್ತಷ್ಟು ವೇಗ ನೀಡಲು ಚಿಂತಿಸಿ ಈ ಕ್ರಮ ಕೈಗೊಳ್ಳಲಾಗಿದೆ, ಕಡತ ವಿಲೇವಾರಿ ಅಭಿಯಾನದಲ್ಲಿ ಇಂದಿನಿಂದ ಫೆ.28ರ ವರೆಗೆ ಒಟ್ಟು 10 ದಿನಗಳು ಜಿಲ್ಲೆಯಲ್ಲಿ ಬಾಕಿ ಉಳಿದ ಎಲ್ಲಾ ಕಡತಗಳ ವಿಲೇವಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ, ಗ್ರಾಮ ಪಂಚಾಯತ್‍ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಈ ಕೆಲಸದಲ್ಲಿ ತೊಡಗಿಕೊಳ್ಳಬೇಕು, ಅದಕ್ಕೆ ಜಿಲ್ಲಾಡಳಿತವೂ ಫೆ.15ರಿಂದಲೇ ಸಿದ್ದಗೊಂಡಿದೆ, 28ರ ನಂತರ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಂದಾಯ ಮೇಳ ಆರಂಭಿಸಲಾಗುವುದು, ಈ ಅವಧಿಯಲ್ಲಿ ಅಧಿಕಾರಿಗಳು ರಜೆ ಮೇಲೆ ತೆರಳುವಂತಿಲ್ಲ ಹಾಗೂ ಹೆಚ್ಚುವರಿಯಾಗಿ ಒಂದು ಗಂಟೆ ಕಚೇರಿಯಲ್ಲಿ ಕೆಲಸ ಮಾಡುವ ಮೂಲಕ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಬೇಕು, ಮಂಗಳೂರು ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿದೆ, ಚುರುಕಿನಿಂದ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ಸಚಿವರು ಹೇಳಿದರು.
ಕೋವಿಡ್ ಸೋಂಕು ಹಿನ್ನಲೆಯಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಅದರ ನಿವಾರಣೆ ಹಿಂದೆ ಇದ್ದ ಕಾರಣ ಇತರೆ ಕೆಲಸ ಕಾರ್ಯಗಳು ಏರುಪೇರಾಗಿದ್ದವು, ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ, ಅಧಿಕಾರಿಗಳು ಜನರ ಮಧ್ಯೆ ಮಧ್ಯವರ್ತಿಗಳು ಇರಬಾರದು, ನೇರವಾಗಿ ಜನಸಾಮಾನ್ಯರು ಅಧಿಕಾರಿಗಳನ್ನೇ ಭೇಟಿಯಾಗುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು, ಮೂರು ಭಾಗಗಳಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು, ಹಳೆಯ ಕಡತಗಳು, ದೂರು ಅರ್ಜಿಗಳು ಹಾಗೂ ಪಿಂಚಣಿ ಅರ್ಜಿಗಳು ಸೇರಿದಂತೆ 45 ಇಲಾಖೆಗಳ ವ್ಯಾಪ್ತಿಯಲ್ಲಿ 32,528 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು ಎಂದು ಹೇಳಿದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಿರಿನಾಥ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ವೇದಿಕೆ ಯಲ್ಲಿದ್ದರು. ಉಪ ಕಾರ್ಯದರ್ಶಿ ಆನಂದ ಕುಮಾರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.