| ಮಣಿಪಾಲ ಫೆ.19 (ಉಡುಪಿ ಟೈಮ್ಸ್ ವರದಿ): ಮಂಚಿ ಕುಮೇರಿಯ ಸುಮತಿ ಎಂಬವರನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂಬಿ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿರುವ ಘಟನೆ ಶಿವಳ್ಳಿಯ ಮಂಚಿಕುಮೇರಿಯಲ್ಲಿ ನಡೆದಿದೆ.
ಹಳೆಯ ದ್ವೇಷದಿಂದ ಸುಮತಿರವರ ಅಕ್ಕನ ಮಗ ಮಂಗಳೂರಿನ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಈ ಕೃತ್ಯ ಎಸಗಿರುವುದಾಗಿ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ನಿನ್ನೆ ಸಂಜೆ ವೇಳೆ ಸುದರ್ಶನ್ ಎಂಬವರು ತಮ್ಮ ಮನೆಯಿಂದ ಸಮೀಪದ ಮೈದಾನದ ಕಡೆಗೆ ಹೋಗುತ್ತಿದ್ದ ವೇಳೆ ಸ್ಥಳೀಯ ರಮಾನಾಥ ರೈಅವರ ಮನೆಯ ಕಡೆಗೆ ಇಬ್ಬರು ದೊಡ್ಡ ಟ್ರಾಲಿ ಬ್ಯಾಗ್ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಸ್ವಲ್ಪ ಸಮಯದ ನಂತರ ರಮಾನಾಥ್ ರೈ ರವರು ಜೋರಾಗಿ ಕಿರುಚುತ್ತಾ ಎಲ್ಲರನ್ನು ಕರೆದಿದ್ದಾರೆ. ಆಗ ಅಲ್ಲೆ ಇದ್ದ ಸುದರ್ಶನ್, ಮಿಥುನ್ ಗ್ರೌಂಡ್‌ನಲ್ಲಿದ್ದ ಮಹಮ್ಮದ್ ಇಸ್ಮಾಯಿಲ್, ಸದಾನಂದ್, ಹರೀಶ್, ಮೇಘಳಾ ಹಾಗೂ ಇತರರು ಅಲ್ಲಿಗೆ ಬಂದು ರಮಾನಾಥ್ ರೈ ರವರಲ್ಲಿ ಕೇಳಿದಾಗ ಅವರು ತಮ್ಮ ಹೆಂಡತಿ ಬಾಗಿಲು ತೆರೆಯುತ್ತಿಲ್ಲ ಒಳಗೆ ಏನೋ ಶಬ್ದ ಕೇಳಿಸುತ್ತಿದೆ, ಬಾಗಿಲಿಗೆ ಚಿಲಕ ಹಾಕಿದ್ದಾಳೆ ಎಂದು ತಿಳಿಸಿದ್ದಾರೆ.
ಈ ವೇಳೆ ಎಲ್ಲರೂ ಅವರ ಮನೆಯ ಮುಂದಿನ ಬಾಗಿಲನ್ನು ತಟ್ಟಿದಾಗ ಮುಂದಿನ ಬಾಗಿಲನ್ನು ಒಳಗಿನಿಂದ ತೆರೆದು ಇಬ್ಬರು ದೂಡಿಕೊಂಡು ಹೊರಗೆ ಬಂದಿದ್ದಾರೆ. ತಕ್ಷಣ ಸುದರ್ಶನ್, ಶ್ರೀಧರ್‌ಭಕ್ತ, ರಮಾನಾಥ್ ರೈ ಮತ್ತು ಮಿಥುನ್ ಎಂಬವರು ಮನೆಯ ಒಳಗೆ ಹೋಗಿ ನೋಡಿದಾಗ ಹಾಲ್‌ನಲ್ಲಿ ಸುಮತಿಯವರನ್ನು ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ದೊಡ್ಡ ಟ್ರಾಲಿ ಬ್ಯಾಗ್ ಒಳಗೆ ಹಾಕಿರುವುದು ಕಂಡು ಬಂದಿದೆ. ಈ ವೇಳೆ ಸುಮತಿಯವರು ಅರೆಪ್ರಜ್ಞಾವಸ್ಥೆಯಲ್ಲಿದ್ದುದು ಕಂಡು ಬಂದಿದೆ. ಕೃತ್ಯ ಎಸಗಿದ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ. ಈ ಬಗ್ಗೆ ಸುದರ್ಶನ್ ಎಂಬವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |