ಉಕ್ರೇನ್ ಪರಿಸ್ಥಿತಿ ಕುರಿತು ಭಾರತದ ನಿಲುವು ಸ್ವಾಗತಿಸಿದ ರಷ್ಯಾ
ಮಾಸ್ಕೋ: ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತಳೆದ ನಡೆಯನ್ನು ರಷ್ಯಾ ಸ್ವಾಗತಿಸಿದೆ. ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ದೇಶಗಳು ಮತ್ತು ಮಾಸ್ಕೋ ನಡುವಿನ ಉದ್ವಿಗ್ನತೆಯ ಮಧ್ಯೆ, ಪೂರ್ವ ಯುರೋಪಿಯನ್ ರಾಷ್ಟ್ರದ ಪರಿಸ್ಥಿತಿಯ ಬಗ್ಗೆ ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ನಿಲುವನ್ನು ರಷ್ಯಾ ಶುಕ್ರವಾರ ಸ್ವಾಗತಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ‘ಶಾಂತ ಮತ್ತು ರಚನಾತ್ಮಕ ರಾಜತಾಂತ್ರಿಕತೆ’ ಈ ಸಮಯದ ಅಗತ್ಯವಾಗಿದೆ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ಹೆಜ್ಜೆಯನ್ನು ತಪ್ಪಿಸಬೇಕು ಎಂದು ಭಾರತ ಹೇಳಿದ ಒಂದು ದಿನದ ನಂತರ ರಷ್ಯಾದಿಂದ ಈ ಪ್ರತಿಕ್ರಿಯೆ ಬಂದಿದೆ. ಉಕ್ರೇನ್ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ, ಯುಎನ್‌ಗೆ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಗುರುವಾರ ಪರಿಸ್ಥಿತಿ ಯನ್ನು ತಕ್ಷಣ ತಿಳಿಗೊಳಿಸುವಂತೆ ಒತ್ತಾಯಿಸಿದ್ದರು.
ಇತ್ತ ದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಕೂಡ ಭಾರತವು ಉದ್ವಿಗ್ನತೆಯನ್ನು ತಕ್ಷಣವೇ ತಗ್ಗಿಸಲು ಮತ್ತು ನಿರಂತರ ರಾಜತಾಂತ್ರಿಕ ಮಾತುಕತೆಯ ಮೂಲಕ ಪರಿಸ್ಥಿತಿಯ ಪರಿಹಾರವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರು. ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಾಹಿತಿ ಮತ್ತು ನೆರವು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿತ್ತು. ಇದಲ್ಲದೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪೂರ್ವ ಯುರೋಪಿಯನ್ ರಾಷ್ಟ್ರದಲ್ಲಿರುವ ಭಾರತೀಯರಿಗಾಗಿ 24 ಗಂಟೆಗಳ ಸಹಾಯವಾಣಿಯನ್ನು ಕೂಡ ಸ್ಥಾಪಿಸಿತ್ತು.
ಈ ಹಿಂದೆ ನೌಕಾ ಸೇನೆ ತರಬೇತಿಗಾಗಿ ಕಪ್ಪು ಸಮುದ್ರಕ್ಕೆ ಯುದ್ಧನೌಕೆಗಳನ್ನು ಕಳುಹಿಸುವುದರ ಜೊತೆಗೆ ಉಕ್ರೇನ್ ನೊಂದಿಗಿನ ತನ್ನ ಗಡಿಯ ಬಳಿ ರಷ್ಯಾ ಸುಮಾರು 100,000 ಸೈನಿಕರನ್ನು ನಿಯೋಜಿಸಿತ್ತು. ಇದು ಉಭಯ ದೇಶಗಳ ನಡುವೆ ಯುದ್ಧ ಭೀತಿ ಆವರಿಸುವಂತೆ ಮಾಡಿತ್ತು. ಉಕ್ರೇನ್‌ನ ಸಂಭಾವ್ಯ ರಷ್ಯಾದ ಆಕ್ರಮಣದ ಬಗ್ಗೆ NATO ದೇಶಗಳಲ್ಲಿ ಕಳವಳವನ್ನು ಉಂಟುಮಾಡಿತ್ತು. ಆದರೆ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಯೋಜನೆ ಇಲ್ಲ ಎಂದು ಹೇಳಿದ್ದ ರಷ್ಯಾ ಎಲ್ಲ ಆರೋಪಗಳನ್ನೂ ನಿರಾಕರಿಸಿತ್ತು.