ಬೇಕಿದ್ದರೇ ಇಟ್ಟುಕೊಳ್ಳಿ, ಇಲ್ಲದಿದ್ದರೇ ಬಿಟ್ಟು ಬಿಡಿ: ಶಾಸಕರ ತಂತ್ರಗಳಿಗೆ ಕೇರ್ ಮಾಡದ ಸಿಎಂ
ಬೆಂಗಳೂರು: ವಿವಿಧ ನಿಗಮ-ಮಂಡಳಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ 20 ಶಾಸಕರನ್ನು ನೇಮಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದೆ, ಸಚಿವ ಸ್ಥಾನಕ್ಕೆ ಅರ್ಹರಾದ ನಮಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡಿದ್ದಾರೆ ಎಂದು ಕೆಲವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯನ್ನು ತಿರಸ್ಕರಿಸಿದ್ದಾರೆ.
ಆದರೆ ಶಾಸಕರ ಹುದ್ದೆ ತಿರಸ್ಕರಿಸುವ ಈ ತಂತ್ರಕ್ಕೆ ಸಿಎಂ ಯಡಿಯೂರಪ್ಪ ಡೋಂಟ್ ಕೇರ್ ಎಂದಿದ್ದಾರೆ, ಬೇಕಿದ್ದರೇ ಇಟ್ಟುಕೊಳ್ಳಿ ಅಥವಾ ಬಿಟ್ಟುಬಿಡಿ ಎನ್ನುವ ಮೂಲಕ ಶಾಕ್ ನೀಡಿದ್ದಾರೆ. ಹೀಗಾಗಿ ಕೆಲವು ಶಾಸಕರು ಬೇರೆ ದಾರಿಯಿಲ್ಲದೇ ಸ್ವಯಂ ಪ್ರೇರಿತರಾಗಿ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಯಡಿಯೂರಪ್ಪ ನಮಗೆ ಕರೆ ಮಾಡಿ ಸಮಾಧಾನ ಮಾಡುತ್ತಾರೆ ಎಂದು ಕೆಲವರು ಭಾವಿಸಿದ್ದರು, ಆದರೆ ಸದ್ಯ ಅದ್ಯಾವುದು ಆಗಿಲ್ಲ, ಇನ್ನು ಕೆಲವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದರು ಎನ್ನಲಾಗಿದೆ. ಆದರೆ ಕಟೀಲ್ ಕೂಡ ಸೊಪ್ಪು ಹಾಕದ ಕಾರಣ ಶಾಸಕರು ಸದ್ದಿಲ್ಲದೇ ಹುದ್ದೆ ಸ್ವೀಕರಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಮಕಾಲೀನ ರಾಜಕಾರಣದ ಒಡನಾಡಿಯಾಗಿ ಆರಗ ಬೆಳೆದವರು. ಸಂಘ ಪರಿವಾರದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು ಪಕ್ಷದ ಶಿಸ್ತಿನ ಸಿಪಾಯಿಯಾಗಿ ರಾಜಕಾರಣದ ಏಳುಬೀಳುಗಳ ನಡುವೆ ಸಜ್ಜನಿಕೆ ರಾಜಕಾರಣ ಮೈಗೂಡಿಸಿಕೊಂಡವರು ಅರಗ ಜ್ಞಾನೇಂದ್ರ. ಅವರನ್ನು ಗೃಹ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಾಯಕತ್ವ ಸೀಮಿತಗೊಳಿಸಿತೇ ಎಂಬ ಸಂದೇಹ ಕ್ಷೇತ್ರದಲ್ಲಿಈಗ ಚಿಗುರೊಡೆದಿದೆ.
ನನ್ನ ಹಿರಿತನಕ್ಕೆ ಸಚಿವ ಸಚಿವ ಸ್ಥಾನದ ನಿರೀಕ್ಷೆ ಈಗಲೂ ಇದೆ. ನನ್ನ ಹಕ್ಕೊತ್ತಾಯ ಮುಂದುವರಿಸುತ್ತೇನೆ. ನನ್ನ ದುರಾದೃಷ್ಟ ಪಕ್ಷ ಅಧಿಕಾರ ಬಂದಾಗೆಲ್ಲಾ ಬಹುಮತ ಸಿಕ್ಕಿಲ್ಲ. ನನಗೆ ಸಚಿವ ಸ್ಥಾನ ಕೊಡಬೇಕು ಎಂಬ ಇರಾದೆ ಸಿಎಂಗೆ ಇದ್ದರೂ ರಾಜಕೀಯ ಸನ್ನಿವೇಶಗಳಿಂದ ಸಾಧ್ಯವಾಗದೆ ಇರಬಹುದು. ಅವರಿಗೆ ಇರಿಸು ಮುರಿಸು ಮಾಡಲ್ಲ. ಸಿಕ್ಕ ಅಧಿಕಾರ ಸ್ವೀಕರಿಸಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಇನ್ನೂ ಲಿಂಗಾಯತ ಸಮುದಾಯದ ಕಳಕಪ್ಪ ಬಂಡಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕನಾಗಿದ್ದು, ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಕೆಎಸ್ ಎಸ್ ಐಡಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಅಧಿಕಾರ ಸ್ವೀಕರಿಸುತ್ತೇನೆ, ಬೆಂಗಳೂರಿಗೆ ಹೋದಾಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಸಮಾಧಾನ ವ್ಯಕ್ತ ಪಡಿಸಿದ್ದ ಕೆಲವು ಶಾಸಕರು ಯಡಿಯೂರಪ್ಪ ಆಪ್ತರು ಮತ್ತು ಸಿಎಂ ಪುತ್ರರ ಜೊತೆ ಸಮಾಲೋಚಿಸಿ ಹುದ್ದೆ ಸ್ವೀಕರಿಸಲು ಮುಂದಾಗಿದ್ದಾರೆ. ಒಂದು ವೇಳೆ ಅಸಮಾಧಾನಿತ ಶಾಸಕರು ಗುಂಪು ಕಟ್ಟಿಕೊಂಡು ಬಂಡಾಯ ಸಾರಿದರೇ ಏನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದಾರೆ, ಏಕೆಂದರೇ ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ಅಧಿಕಾರಕ್ಕೆ ಬಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಸಚಿವ ಸ್ಥಾನ ಸಿಗದಿದ್ದರೇ ಕಡೇ ಪಕ್ಷ ಬೇರೆ ಹುದ್ದೆ ನೀಡುವಂತೆ ಕೆಲವು ಶಾಸಕರು ಮನವಿ ಮಾಡಿದ್ದರು ಎಂದು ಬಿಜೆಪಿ ಪದಾದಿಕಾರಿಯೊಬ್ಬರು ತಿಳಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಒಪ್ಪಿದರೇ ಮುಂದಿನ ಸುತ್ತಿನಲ್ಲಿ ಪಕ್ಷದ ಕಾರ್ಯಕರ್ತರನ್ನು ನಿಗಮ-ಮಂಡಳಿಗೆ ನೇಮಕ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.