ಕೋಟ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ- 7 ಪೊಲೀಸರ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಕುಂದಾಪುರ, ಫೆ.18 : ಕೋಟತಟ್ಟುವಿನ ಕೊರಗ ಸಮುದಾಯದವರ ಮನೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಎಸ್ಸೈ, ಹೆಡ್‌ಕಾನ್‌ಸ್ಟೇಬಲ್ ಸೇರಿದಂತೆ ಏಳು ಮಂದಿ ಪೊಲೀಸರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕುಂದಾಪುರ ನ್ಯಾಯಾಲಯ ವಜಾ ಗೊಳಿಸಿದೆ.

ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಎಸ್ಸೈ ಸೇರಿದಂತೆ ಏಳು ಮಂದಿ ಪೊಲೀಸರು, ಜ.3ಕ್ಕೆ ಕುಂದಾಪುರ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಜೋಷಿ ಅವರು ಎಲ್ಲರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ಗಣಪ ಎಂಬವರ ಮನೆಯಲ್ಲಿ ಡಿ.27 ರಂದು ರಾತ್ರಿ ಮೆಹಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಿನ ಕೋಟ ಎಸ್ಸೈ ಸಂತೋಷ್ ಬಿ.ಪಿ., ಹೆಡ್‌ ಕಾನ್‌ಸ್ಟೇಬಲ್ ರಾಮಣ್ಣ, ಅಶೋಕ್ ಶೆಟ್ಟಿ, ಮಂಜು ನಾಥ್ ಮತ್ತು ಇತರ ಪೊಲೀಸರು ನುಗ್ಗಿ ನೆರೆದ ಜನರ ಮೇಲೆ ವಿನಾಕಾರಣ ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ಎಸಗಿದ್ದರೆಂದು ಮಧುಮಗ ರಾಜೇಶ್ ದೂರು ನೀಡಿದ್ದರು. ಅದರಂತೆ ಕೋಟ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

error: Content is protected !!