ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ: 38 ಅಪರಾಧಿಗಳಿಗೆ ಮರಣದಂಡನೆ-11 ಮಂದಿಗೆ ಜೀವಾವಧಿ ಶಿಕ್ಷೆ
ಅಹಮದಾಬಾದ್: 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ವಿಶೇಷ ಕೋರ್ಟ್ ಮರಣದಂಡನೆ ವಿಧಿಸಲಾಗಿದೆ. 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಜುಲೈ 26, 2008 ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್‌ನ ವಿವಿಧ ಪ್ರದೇಶಗಳಲ್ಲಿ 20 ಬಾಂಬ್‌ಗಳು ಸ್ಫೋಟಗೊಂಡಿದ್ದವು. ಸ್ಫೋಟಗಳಲ್ಲಿ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಸದಸ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. 2002ರ ಗೋಧ್ರಾ ನಂತರದ ಗಲಭೆಗೆ ಪ್ರತೀಕಾರವಾಗಿ ಐಎಂ ಭಯೋತ್ಪಾದಕರು ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಜುಲೈ 26, 2008 ರಂದು ಅಹಮದಾಬಾದ್ ನಗರದಲ್ಲಿ ಸರಣಿ ಸ್ಫೋಟ ನಡೆದಿತ್ತು. ಅದರಲ್ಲಿ 56 ಜನರು ಮೃತರಾಗಿದ್ದರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಫೆಬ್ರವರಿ 8, 2022 ರಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.
2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 77 ಆರೋಪಿಗಳ ಪೈಕಿ 28 ಮಂದಿಯನ್ನು ಗುಜರಾತ್‌ನ ವಿಶೇಷ ನ್ಯಾಯಾಲಯ ಫೆಬ್ರವರಿ 8ರಂದು ಖುಲಾಸೆಗೊಳಿಸಿತ್ತು. ಉಳಿದ 49 ಜನರನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು. ಇಸ್ಲಾಮಿಕ್ ಭಯೋತ್ಪಾದಕ ಗುಂಪು, ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಈ ಹಿಂದೆ 85 ಜನರನ್ನು ಬಂಧಿಸಿದ್ದರು. ಆದರೆ, 78 ಜನರ ವಿರುದ್ಧ ಮಾತ್ರ ವಿಚಾರಣೆ ಪ್ರಾರಂಭವಾಗಿತ್ತು. ಆರೋಪಿಗಳ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಲಾಗಿತ್ತು