ಕಲ್ಯಾಣಪುರ: ಕಾಲೇಜ್ ನಲ್ಲಿ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತಡೆ- ತರಗತಿ ಬಹಿಷ್ಕಾರ
ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜ್ ನಲ್ಲೂ ಇಂದು ಹಿಜಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಯ ಒಳಗೆ ಪ್ರವೇಶಿಸಲು ಬಿಡದ ಕಾಲೇಜ್ ನ ಪ್ರಿನ್ಸಿಪಾಲ್ ಕ್ರಮವನ್ನು ವಿದ್ಯಾರ್ಥಿಗಳು ವಿರೋಧಿಸಿದ ಘಟನೆ ನಡೆದಿದೆ.
ಇಂದು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದರೂ ನ್ಯಾಯಾಲಯದ ಆದೇಶದಂತೆ ಹಿಜಬ್ ಧರಿಸಿದ 45 ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಿನ್ಸಿಪಾಲ್ ತರಗತಿ ಒಳಗ ಪ್ರವೇಶಕ್ಕೆ ತಡೆವೊಡ್ಡಿದ್ದರು. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯದ 110 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗೆ ಬಹಿಷ್ಕಾರ ಹಾಕಿ ಹೊರ ನಡೆದಿದ್ದಾರೆ. ನಲವತ್ತಕ್ಕೂ ಹೆಚ್ಚೂ ವಿದ್ಯಾರ್ಥಿನಿಯರು ಎಂದಿನಂತೆ ಕಾಲೇಜಿಗೆ ಹಿಜಬ್ ಧರಿಸಿ ಬಂದಿದ್ದರು. ಇ0ದು ಪರೀಕ್ಷೆ ಇದ್ದರೂ ನಮಗೆ ಹಿಜಬ್ ಧರಿಸಿ ತರಗತಿ ಪ್ರವೇಶಕ್ಕೆ ತಡೆವೊಡ್ಡಿದ್ದರು ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಕಾಲೇಜು ಪಿಯು, ಪದವಿ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಡ್ರೆಸ್ ಕೋಡ್ ಅನ್ನು ಜಾರಿಗೆ ತಂದಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ಆಂತರಿಕ ಪರೀಕ್ಷೆಗಳು ಗುರುವಾರ ಪ್ರಾರಂಭವಾಗಿದ್ದು, ಇನ್ನೂ ಎರಡು ದಿನಗಳ ಕಾಲ ನಡೆಯಲಿದೆ ಎಂದು ಹೇಳಿದರು. ಹಿಜಾಬ್ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ ಅನೇಕ ವಿದ್ಯಾರ್ಥಿನಿಯರಿಗೆ ಸಮಸ್ಯೆ ಉಂಟುಮಾಡಿದೆ. ಆದ್ದರಿಂದ ತಾವು ತರಗತಿಗಳನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.
ಆದರೆ ನ್ಯಾಯಾಲಯದ ಮಧ್ಯಂತರ ಆದೇಶಕ್ಕೆ ಎಲ್ಲರೂ ಬದ್ಧರಾಗಿರಬೇಕು. ಆದ್ದರಿಂದ ಹಿಜಾಬ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ಪ್ರಾಂಶುಪಾಲ ಡಾ ವಿನ್ಸೆಂಟ್ ಆಳ್ವ ಹೇಳಿದ್ದಾರೆ.