ಬಚ್ಚಲು ಬಾಯಿ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು: ಡಿಕೆಶಿ
ಬೆಂಗಳೂರು: ನಮಗೆ ಸಚಿವ ಈಶ್ವರಪ್ಪನವರ ರಾಜೀನಾಮೆ ಬೇಕಾಗಿಲ್ಲ, ರಾಜೀನಾಮೆ ಎನ್ನುವುದು ಬಹಳ ಗೌರವಯುತ ಪದ. ಲಾಲ್ ಬಹದ್ದೂರ್ ಶಾಸ್ತ್ರಿಯಂತವರು ಗೌರವಯುತವಾಗಿ ತಮ್ಮ ಹುದ್ದೆ ತ್ಯಾಗ ಮಾಡಿದವರು. ಬಚ್ಚಲು ಬಾಯಿ ಈಶ್ವರಪ್ಪನವರನ್ನು ರಾಜ್ಯಪಾಲರು, ಸಿಎಂ ಬೊಮ್ಮಾಯಿ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸುತ್ತಿದ್ದಾರೆ.
ರಾಷ್ಟ್ರಧ್ವಜ ಕುರಿತು ಹೇಳಿಕೆ ನೀಡಿ ದೇಶಕ್ಕೆ, ದೇಶದ ಘನತೆ-ಗೌರವದ ಸಂಕೇತವಾದ ರಾಷ್ಟ್ರಧ್ವಜಕ್ಕೆ ಗ್ರಾಮೀಣಾ ಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರು ಅವಮಾನ ಮಾಡಿದ್ದಾರೆ ಅವರನ್ನು ಸಂಪುಟದಿಂದ ವಜಾ ಮಾಡ ಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ತೀವ್ರವಾಗಿದೆ. ಕಾಂಗ್ರೆಸ್ ನಾಯಕರೆಲ್ಲ ವಿಧಾನಸೌಧದ ಒಳಗೆ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಇಂದು ಕೂಡ ಅವರ ಹೋರಾಟ ಮುಂದುವರಿಯುವ ಸಾಧ್ಯತೆಯಿದ್ದು, ವಿಧಾನಮಂಡಲ ಕಲಾಪದಲ್ಲಿ ಮತ್ತೆ ಗದ್ದಲ, ಕೋಲಾಹಲ ಮುಂದುವರಿಯುವ ಸಾಧ್ಯತೆ ಸಾಕಷ್ಟಿದೆ. ಕಲಾಪಕ್ಕೆ ಅಡ್ಡಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ತಮ್ಮ ಹೋರಾಟವನ್ನು ಮುಂದುವರಿಸುವ ಕುರಿತು ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿ ಕೆ ಶಿವಕುಮಾರ್, ನಮ್ಮ ಧರಣಿ ಮುಂದುವರಿಯುತ್ತದೆ. ನಾನು ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೇಳುತ್ತಿಲ್ಲ. ಈಶ್ವರಪ್ಪ ರಾಜೀನಾಮೆ ನಮಗೆ ಬೇಕಾಗಿಲ್ಲ. ಸಿಎಂ, ಗವರ್ನರ್ ಈಶ್ವರಪ್ಪರನ್ನು ವಜಾ ಮಾಡಬೇಕು. ರಾಜೀನಾಮೆ ಎಂಬುದು ಬಹಳ ಗೌರವಯುತವಾದ ಪದ ಎಂದರು.
ಡಿ.ಕೆ.ಶಿವಕುಮಾರ್ ಹೇಳಿದ್ರು. ದೊಡ್ಡ ಆಸ್ತಿವಂತ ಎಂದು ಬಿಜೆಪಿ ಈಶ್ವರಪ್ಪರನ್ನ ಸ್ವೀಕರಿಸುತ್ತಿದೆ. ಬಿಜೆಪಿಯವರಿಗೆ ರಾಷ್ಟ್ರಧ್ವಜ ಎಂದರೇನೇ ಗೊತ್ತಿಲ್ಲ. ಅವರು ನಮ್ಮ ತಂದೆ, ತಾಯಿ ಎಂದೆಲ್ಲ ಮಾತನಾಡುತ್ತಾರಲ್ಲ ನಾವು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್‌ನವರು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಸಿಎಂ ಆಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದೆ. ರಾಷ್ಟ್ರದ್ರೋಹಿ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ಸೋಮವಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ ಕೊಡುತ್ತೇನೆ. ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸುವಂತೆ ಸಂದೇಶ ಕೊಡುತ್ತೇನೆ ಎಂದರು