ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿಕೋರಿ ಅರ್ಜಿ- ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು ಫೆ.17: ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿಕೋರಿ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿ ದ್ದ ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರ ರವರನ್ನೊಳಗೊಂಡ ತ್ರೀ ಸದಸ್ಯ ಪೀಠ ವಿಚಾರಣೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ಇಂದು ವಿಚಾರಣೆಯ ವಾದ ವಿವಾದ ಆಲಿಸಿದ ಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದ್ದು ನಾಳೆ ಸರಕಾರದ ಪರ ವಾದ ಮಂಡನೆ ನಡೆಯಲಿದೆ.

ವಿಚಾರಣೆಯ ಆರಂಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಹೈಕೋರ್ಟ್ ನಿಯಮದಂತೆ ನೀವು ಪ್ರಮಾಣ ಪತ್ರ ಸಲ್ಲಿಸಿದ್ದೀರಾ? ಪಿಐಎಲ್ ಹಾಕುವವರು ನಿಯಮ ಪಾಲಿಸಬೇಕೆನ್ನುವುದು ತಿಳಿದಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೈಕೋರ್ಟ್ ನಿಯಮದಂತೆ ಪ್ರಮಾಣಪತ್ರ ಸಲ್ಲಿಸಿದ್ದೇವೆ ಎಂದು ವಕೀಲರಾದ ರಹಮತ್ ಉಲ್ಲಾ ಕೊತ್ವಾಲ್  ಹೇಳಿದ್ದಾರೆ. ಆಗ ಇಂತಹ ಅರ್ಜಿಗಳ ಮೂಲಕ ಕೋರ್ಟ್ ಸಮಯ ವ್ಯರ್ಥ ಮಾಡ್ತಿದ್ದೀರಾ? ಎಂದು ನ್ಯಾ.ಕೃಷ್ಣ ದೀಕ್ಷಿತ್ ಹೇಳಿದ್ದಾರೆ‌ ಹಾಗೂ ಸೂಕ್ತವಾದ ಅರ್ಜಿ ಸಲ್ಲಿಸಿಲ್ಲ, ಪೇಜ್ ನಂಬರ್ ಸರಿಯಾಗಿ ಹಾಕಿಲ್ಲ. ಅಂತರಾಷ್ಟ್ರೀಯ ಸಾಮಾಜಿಕ ಆರ್ಥಿಕ ಒಪ್ಪಂದಗಳನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದೀರಾ. ನಿಮ್ಮ ಅರ್ಜಿ ನಿಯಮದ ಪ್ರಕಾರವಿಲ್ಲ ಎಂದು ತಿಳಿಸಿದ್ದಾರೆ.

ಈ ವೇಳೆ ನೀವು 5 ನಿಮಿಷ ಕೊಟ್ಟರೆ ವಾದ ಮುಗಿಸುತ್ತೇನೆ. ಮಹತ್ವದ ಪ್ರಕರಣದಲ್ಲಿ ತಾಂತ್ರಿಕ ಆಕ್ಷೇಪಣೆ ಬೇಡವೆಂದು ಕೋರುತ್ತೇನೆ ಎಂದು ಹೈಕೋರ್ಟ್ ಗೆ ರಹಮತ್ ಉಲ್ಲಾಕೊತ್ವಾಲ್ ಮನವಿ ಮಾಡಿದ್ದಾರೆ. ಆಗ ಸಿಜೆ ಅವರು ಪ್ರತಿಕ್ರಿಯೆ ನೀಡಿ,  ಹೈಕೋರ್ಟ್ ಯಾವ ನಿಯಮ ಅನುಸರಿಸಬೇಕೆಂದು ಹೇಳಬಯಸುತ್ತೀರಾ? ಹೈಕೋರ್ಟ್ ಪಿಐಎಲ್ ನಿಯಮಗಳಿಗೆ ಅನುಸಾರ ಸಲ್ಲಿಕೆಯಾಗಿಲ್ಲ. ಹೀಗಾಗಿ ನಾವು ಈ ಪಿಐಎಲ್ ಅನ್ನು ವಜಾಗೊಳಿಸುತ್ತಿದ್ದೇವೆ ಎಂದು ಸಿಜೆ ಹೇಳಿದ್ದಾರೆ. 

ಬಳಿಕ, ಪಿಐಎಲ್ ಅರ್ಜಿದಾರ ಡಾ.ವಿನೋದ್ ಜಿ ಕುಲಕರ್ಣಿ ವಾದ ಮಂಡನೆ ಆರಂಭಿಸಿದ್ದು, ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ1ನೇ ಮನವಿ, 2ನೆ ಮನವಿ ಒಂದಕ್ಕೊಂದು ವಿರುದ್ಧವಾಗಿದೆ. 1ನೇ ಮನವಿಯಲ್ಲಿ ಸಮವಸ್ತ್ರ ಕೇಳಿದ್ದೀರಾ, 2ನೇ ಮನವಿಯಲ್ಲಿ ಹಿಜಾಬ್ ಕೇಳುತ್ತಿದ್ದೀರ ಎಂದು ಅರ್ಜಿದಾರರಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಕುಚ್ ಪಾಕರ್ ಕುಚ್ ಕೋನಾ ಹೈ, ಕುಚ್ ಕೋಕರ್ ಕುಚ್ ಪಾನಾ ಹೈ ಎಂದು ಅರ್ಜಿದಾರರ ವಕೀಲರು ಲತಾ ಮಂಗೇಶ್ಕರ್ ಹಾಡು ಉಲ್ಲೇಖಿಸಿ  ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿಲ್ಲ. ಹೀಗಾಗಿ ಶುಕ್ರವಾರ ಹಿಜಾಬ್ ಧರಿಸಲು ಅನುಮತಿ ಕೊಡಿ. ಒಂದು ಪಡೆಯಬೇಕಾದರೆ ಒಂದನ್ನು ಕಳೆದುಕೊಳ್ಳಬೇಕು ಎಂದು  ಹೇಳಿದ್ದಾರೆ ಇನ್ನು ವಾದ ಮಂಡನೆ ವೇಳೆ  ಖುರಾನ್ ನಲ್ಲಿ ಹಿಜಾಬ್ ಬಗ್ಗೆ ಎಲ್ಲಿ ಹೇಳಿದೆ ಓದಿ ಎಂದು ಸಿಜೆ ಕೇಳಿದ್ದು, ಆಗ ವಕೀಲರು ಈಗ ಖುರಾನ್ ನನ್ನ ಬಳಿ ಇಲ್ಲ. ಹೀಗಾಗಿ ಓದಲಾಗುವುದಿಲ್ಲ. ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ಹೇಳಿದ್ದಾರೆ.

ಈ ವೇಳೆ ಹಿಜಾಬ್ ಮತ್ತು ಖುರಾನ್ ಎರಡು ಒಂದೇ ಎನ್ನುತ್ತೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದು, ಈ ವೇಳೆ ಮತ್ತೆ ಹಾಡು ಉಲ್ಲೇಖಿಸಿದ ವಕೀಲರು ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ನೀಡಿ ಎಂದು ಕೇಳಿಕೊಂಡು ತಮ್ಮ ವಾದ ಮಂಡನೆ ಮುಕ್ತಾಯಗೊಳಿಸಿದ್ದಾರೆ.

ಬಳಿಕ ಹಿರಿಯ ವಕೀಲ ಎ.ಎಂ. ಧರ್ ಅವರು ವಾದಮಂಡಿಸಿದ್ದು, ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗದ ಪರಿಸ್ಥಿತಿ ಇದೆ ಎಂದಿದ್ದಾರೆ ಈ ವೇಳೆ ಸಿಜೆ ಅವರು, ನೀವು ಯಾವ ಕಾಲೇಜಿನಲ್ಲಿ ಓದುತ್ತಿದ್ದೀರಾ, ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಕಾಲೇಜು ನಿಮ್ಮನ್ನು ಪ್ರತಿಬಂಧಿಸಿದೆ ಎಂದು ಹೇಳುತ್ತೀರಾ ಎಂದು ನ್ಯಾ.ಕೃಷ್ಣ ದೀಕ್ಷಿತ್ ಕೇಳಿದ್ದಾರೆ. ಹೌದು ಈ ಅಂಶವನ್ನು ನಾವು ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ ಎಂದು ಎ.ಎಂ.ಧರ್ ಹೇಳಿದ್ದಾರೆ. ಪಿಯುಸಿ ಎಂದು ಉಲ್ಲೇಖಿಸಿದ್ದೇವೆ, ಕ್ಷಮಿಸಿ, ಹೆಸರನ್ನು ಸೇರಿಸಲು ಅನುಮತಿ ಕೋರುತ್ತೇನೆ ಎಂದು ಕೇಳಿ ಬೆಂಗಳೂರಿನಲ್ಲಿ ನಾವು ವಿದ್ಯಾಭ್ಯಾಸ ಮಾಡುತ್ತಿದ್ದೇವೆ ಎಂದು ಎ.ಎಂ. ಧರ್ ಹೇಳಿದ್ದು, ಇಂತಹ ಪ್ರಮುಖ ವಿಚಾರಣೆಯಲ್ಲಿ ಹೀಗೆ ಅರ್ಜಿ ಸಲ್ಲಿಸುವುದು ಸೂಕ್ತವೇ ಎಂದು ಅರ್ಜಿದಾರರಿಗೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.

ಆಗ ನಾಳೆ ಈ ಬಗ್ಗೆ ಸೂಕ್ತ ಪ್ರಮಾಣಪತ್ರ ಸಲ್ಲಿಸುತ್ತೇವೆ, ಅವಕಾಶ ಕೊಡಿ ಎಂದು ಕೇಳಿ ಅರ್ಜಿ ಹಿಂಪಡೆಯ ಲು ಅನುಮತಿ ಕೇಳಿದ್ದಾರೆ. ನಾವು ಈಗ ಅರ್ಜಿ ವಜಾಗೊಳಿಸುತ್ತೇವೆ. ಸರಿಯಾದ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತೇವೆ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ. ಮಧ್ಯಂತರ ಅರ್ಜಿದಾರರ ಪರ ಸುಭಾಷ್ ಝಾ ಮನವಿ ಮಾಡಿದ್ದು, ನನಗೆ ಅರ್ಧ ಗಂಟೆ ಸಮಯ ಕೊಡಿ, ಒಂದು ಕಡೆಯ ವಾದ ಮಾತ್ರ ಕೇಳಲಾಗಿದೆ. ನನ್ನ ವಾದವನ್ನು ಹೇಳಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಆಗ ಮಧ್ಯಂತರ ಅರ್ಜಿದಾರರ ವಾದ ಕೇಳಬೇಕೇ ಬೇಡವೇ ನಿರ್ಧರಿಸಿಲ್ಲ. ಮೊದಲಿಗೆ ಅರ್ಜಿದಾರರು ಪ್ರತಿವಾದಿಗಳ ವಾದ ಕೇಳುತ್ತೇವೆ, ನಂತರ ಮಧ್ಯಂತರ ಅರ್ಜಿಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸಿಜೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ಹಾಗೂ ಗಡ್ಡ ಬಿಡುವುದರ ಬಗ್ಗೆ ಕೋರ್ಟ್ ಗಳ ತೀರ್ಪುಗಳಿವೆ. ಇದರ ಬಗ್ಗೆ ನಾನು ಕೋರ್ಟ್ ಗಮನಕ್ಕೆ ತರಬಯಸುತ್ತೇನೆ ಎಂದು ಸುಭಾಷ್ ಝಾ ಹೇಳಿದ್ದಾರೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಪರ ಜಿ.ಆರ್.ಮೋಹನ್ ವಾದ ಮಂಡಿಸಿದ್ದು, ಸರ್ಕಾರದ ಹಿಜಾಬ್ ನಿರ್ದೇಶನ ನಮಗೆ ಅನ್ವಯವಾಗುವುದಿಲ್ಲ. ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ರಾಜಿ ಸಂಧಾನಕ್ಕೆ ಪ್ರಕರಣ ಒಪ್ಪಿಸಲು ವಕೀಲೆಯೊಬ್ಬರ ಮನವಿ ಮಾಡಲಾಗಿದೆ. ಈ ಬಗ್ಗೆ ನಾನು ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ರಾಜಿ ಸಂಧಾನಕ್ಕೆ ಒಪ್ಪಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಮಧ್ಯಂತರ ಅರ್ಜಿದಾರ ವಕೀಲೆಯ ವಾದ ಮಂಡಿಸಲಾಗಿದೆ. ಈ ವೇಳೆ ಎರಡೂ ಕಡೆಯವರು ಒಪ್ಪಿದರೆ ಮಾತ್ರ ರಾಜಿ ಸಂಧಾನ ಸಾಧ್ಯ, ಇಲ್ಲಿ ಸಂವಿಧಾನಿಕ ಪ್ರಶ್ನೆಗಳನ್ನು ಉಲ್ಲೇಖಿಸಲಾಗಿದೆ ಎಂದು ಸಿಜೆ ಹೇಳಿದ್ದಾರೆ. ಪ್ರಕರಣದ ವಾದ ಆಲಿಸಿದ ಹೈಕೋರ್ಟ್ ನ ತ್ರೀ ಸದಸ್ಯ ಪೀಠ  ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದ್ದು,. ನಾಳೆ ಮಧ್ಯಾಹ್ನ2.30 ಕ್ಕೆ ರಾಜ್ಯ ಸರ್ಕಾರದ ಪರ ವಾದಮಂಡನೆ ನಡೆಯಲಿದೆ. 

Leave a Reply

Your email address will not be published. Required fields are marked *

error: Content is protected !!