| ಹೆಬ್ರಿ: ಕಾರ್ಕಳ ಕ್ಷೇತ್ರದ ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿ ಯಾವೂದೇ ಕಡತಗಳ ವಿಲೇವಾರಿ ಆಗುತ್ತಿಲ್ಲ. ವರ್ಷಗಟ್ಟಲೇ ಕಡತ ಹಿಡಿದುಕೊಂಡು ಅಲೆದಾಟ ಮಾಡಬೇಕಿದೆ, ಕಾರ್ಕಳ ಹೆಬ್ರಿಗೆ ಒಬ್ಬರೇ ತಹಶೀಲ್ಧಾರ್ ಇದ್ದಾರೆ, ಅವರಿಗೆ ಕೆಲಸದ ಒತ್ತಡವಿದೆ, ಜನತೆಗೆ ನ್ಯಾಯ ಕೊಡಲು ಹೇಗೆ ಸಾಧ್ಯ.
ಬಿಜೆಪಿಯ ಕಾರ್ಯಕರ್ತರನ್ನು ಕೂರಿಸಿಕೊಂಡು ತಹಶೀಲ್ಧಾರ್ ಕಡತ ವಿಲೇವಾರಿ ಮಾಡುತ್ತಾರೆ.ಹಾಗಾದರೇ ತಾಲ್ಲೂಕು ಕಚೇರಿಯಾಕೆ, ತಾಲ್ಲೂಕು ಕಚೇರಿಯನ್ನೇ ಬಿಜೆಪಿ ಕಚೇರಿ ಮಾಡಿಕೊಳ್ಳಲಿ ಎಂದು ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಕಚೇರಿಯಲ್ಲಿ ಕಮೀಷನ್ ಕೊಟ್ಟರೆ ಮಾತ್ರ ಕೆಲಸಗಳು ಆಗುತ್ತಿದೆ, ಭ್ರಷ್ಟಾಚಾರ ತುಂಬಿ ಹೋಗಿದೆ, ಹಣ ಕೊಟ್ಟರೇ ಮಾತ್ರ ಕೆಲಸ ಎಂಬ ಸ್ಥಿತಿ ನಿರ್ಮಾಣವಾಗಿದೆ, ಡಿಸಿಯ ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡಲಿ, ಬಿಜೆಪಿ ಪಕ್ಷದ ಕಾರ್ಯಕರ್ತರೇ ಮಧ್ಯವರ್ತಿಗಳಾಗಿ ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡಿಸಿಕೊಡುತ್ತಾರೆ ಎಂದು ಗುರುವಾರ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳ ಕ್ಷೇತ್ರದ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕು ಕಚೇರಿಯಲ್ಲಿ ಸಚಿವ ಸುನಿಲ್ ಕುಮಾರ್ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಲು ಅಭಿಯಾನ ನಡೆಸುತ್ತಿರುವುದು ಒಳ್ಳೇಯ ವಿಚಾರ. ಆದರೆ ಕಡತಗಳನ್ನು ಬಾಕಿ ಇರಿಸುವುದು ಯಾಕೆ, ಅಧಿಕಾರಿಗಳೇ ಕಡತವನ್ನು ಬಾಕಿ ಇರಿಸಿಕೊಳ್ಳುತ್ತಾರೋ ಅಥವಾ ಜನಪ್ರತಿನಿಧಿಗಳು ಕಡತ ಬಾಕಿ ಇಡಲು ಹೇಳುತ್ತಾರೋ ಅದು ಬಹಿರಂಗವಾಗಬೇಕು, ಅಂದಿನ ಮುಖ್ಯ ಮಂತ್ರಿ ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಶೀಘ್ರ ಕಡತ ವಿಲೇವಾರಿಗೆ ಆರಂಭಿಸಿದ ಸಕಾಲ ಯೋಜನೆ ಕಾಲವಾಯಿತೇ ಪ್ರಶ್ನಿಸಿದ್ದಾರೆ.
ಮಾತೃ ಇಲಾಖೆಯಾದ ಕಂದಾಯ ಇಲಾಖೆಯಲ್ಲಿ ಎಸಿಯಿಂದ ಹಿಡಿದು ಸಾಮಾನ್ಯ ನೌಕರರ ವರೆಗೂ ಲಂಚದ ಬದಲು ಕಮೀಷನ್ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ, ಸಾಮಾನ್ಯ ಜನರ ಕೆಲಸಗಳೇ ಆಗುತ್ತಿಲ್ಲ, ಡಿಸಿ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಲಿ ಎಂದು ಮಂಜುನಾಥ ಪೂಜಾರಿ ಹೇಳಿದರು. ಬಿಜೆಪಿ ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ: ಭೂಮಿ ಮನೆ ನೀರು ಜನರ ಬದುಕಿನ ಪ್ರಮುಖ ವಿಚಾರ, ಆದರೆ ಬಿಜೆಪಿ ಸರ್ಕಾರ ಜನರಿಗೆ ಒಂದೇ ಒಂದು ಉಪಯೋಗ ಆಗುವ ಕೆಲಸ ಮಾಡುತ್ತಿಲ್ಲ, ಧರ್ಮದ ಹೆಸರಿನಲ್ಲಿ ಮನೆ ಮನವನ್ನು ಒಡೆದು ಆಳುತ್ತಿದೆ, ಧರ್ಮದ ಹೆಸರಿನ ಅಪಪ್ರಚಾರವೇ ಬಿಜೆಪಿಯ ಮತ ಪಡೆಯುವ ತಂತ್ರ, ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಮುಂದಿನ ಚುನಾವಣೆಗಾಗಿ ಜನರಿಗೆ ಆಸೆ ಹುಟ್ಟಿಸಿ ನಾಟಕ ಆಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ದೂರಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಸುರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ,ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಜನಾರ್ಧನ್, ಪ್ರಮುಖರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಶಶಿಕಲಾ ದಿನೇಶ್ ಪೂಜಾರಿ, ವಿಶು ಕುಮಾರ್ ಮುದ್ರಾಡಿ, ಸುಂದರ ಶಿರೂರು ಮುಂತಾದವರು ಉಪಸ್ಥಿತರಿದ್ದರು. | |