ಮುಸ್ಲಿಮ್ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ- ಪೋಷಕರ ಆರೋಪ

ಉಡುಪಿ:ನಾವು ಕೂಡ ಭಾರತ ದೇಶದಲ್ಲಿಯೇ ಇದ್ದೇವೆ. ಆದರೆ ತಲೆಗೆ ಹಿಜಾಬ್ ಹಾಕಿಕೊಂಡರೆ ಶಿಕ್ಷಣ ನೀಡುವುದಿಲ್ಲ ಎನ್ನುತ್ತಿದ್ದಾರೆ. ಇದು ಮುಸ್ಲಿಮ್ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಎಂದು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯ ತಂದೆ ಮಹಮ್ಮದ್ ಹನೀಫ್ ಆರೋಪಿಸಿದ್ದಾರೆ.

ಅವರ ಮಗಳು ಇಂದು ಕೂಡ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದಿದ್ದು, ಹೀಗಾಗಿ ತರಗತಿ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹನೀಫ್ ಅವರು, ನನ್ನ ಮಗಳು ಈ ಕಾಲೇಜಿನಲ್ಲಿ ಬಿ.ಎ. ಪ್ರಥಮ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನನ್ನ ಮಗಳು ನಿನ್ನೆ ಆದ ಘಟನೆ ಬಳಿಕ ಕಾಲೇಜಿಗೆ ಬರಲು ಹೆದರುತ್ತಿದ್ದಾಳೆ. ಹೀಗಾಗಿ ನಾನೇ ಆಕೆಯನ್ನು ಕಾಲೇಜಿಗೆ ಕರೆದುಕೊಂಡು ಬಂದಿದ್ದಾನೆ ಎಂದರು. ಹಿಜಾಬ್ ಧರಿಸಿ ಬಂದರೆ ತರಗತಿಯೊಳಗೆ ತೆಗೆದುಕೊಳ್ಳುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ಹೇಳುತ್ತಿದ್ದಾರೆ.

ನನಗೆ ಇದು ಅರ್ಥ ಆಗುತ್ತಿಲ್ಲ. ಹಿಜಾಬ್ ಧಾರಣೆ ಮಾಡುವುದು ನಮ್ಮ ಧಾರ್ಮಿಕ ಆಚರಣೆ. ಇದನ್ನು ಈ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ನಮಗೆ ಶಿಕ್ಷಣ ಎಷ್ಟು ಮುಖ್ಯವೋ ಧರ್ಮ‌ ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು. ಸಮಾಜಕ್ಕೆ ಏನನ್ನಾದರೂ ಮಾಡಲಿ ಎಂಬ ಉದ್ದೇಶದಿಂದ ಮಗಳಿಗೆ ಶಿಕ್ಷಣ ಕೊಡಿಸಿದ್ದೇನೆ. ಅಲ್ಲದೆ, ಆಕೆಯನ್ನು ವಕೀಲೆಯನ್ನಾಗಿ ಮಾಡಲು ಬಯಸಿದ್ದೆ. ಆದರೆ ಇವರು‌ ಅವಕಾಶ ನೀಡುವುದಿಲ್ಲ ಎಂದಾದರೆ ಏನು ಮಾಡಲು ಸಾಧ್ಯ. ದೇವರ ಮೇಲೆ ಭಾರಹಾಕಿ ಮುಂದಿನ ಜೀವನ ನೋಡಿ ಕೊಳ್ಳುತ್ತೇವೆ ಎಂದು ಅವರು ಅಳಲು ತೋಡಿಕೊಂಡರು.

Leave a Reply

Your email address will not be published. Required fields are marked *

error: Content is protected !!