ಸಚಿವ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್‍ ಧರಣಿ- ಸದನ ನಾಳೆಗೆ ಮುಂದೂಡಿಕೆ

ಬೆಂಗಳೂರು: ವಿಧಾನಮಂಡಲ ಅಧಿವೇಶನದ ವೇಳೆ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ನಾಯಕರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆಂಬ ಆರೋಪಕ್ಕೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸದನವನ್ನು ಸಭಾಧ್ಯಕ್ಷರು ನಾಳೆಗೆ ಮುಂದೂಡಿದರು.

ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದಿ ಧರಣಿ ಮುಂದುವರೆಸಿದರು. ಜೊತೆಗೆ ರಾಷ್ಟ್ರಧ್ವಜವನ್ನ ಹಿಡಿದು ಧರಣಿನಡೆಸಲು ಮುಂದಾದ ಕಾಂಗ್ರೆಸ್‍ ಸದಸ್ಯರಿಗೆ ಸಭಾಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು, ರಾಷ್ಟ್ರ ಧ್ವಜವನ್ನ ನಿಮ್ಮ ಪ್ರತಿಭಟನೆಗೆ ಬಳಸಿ ಕೊಳ್ಳುವುದು ಸರಿಯಲ್ಲ, ನಿಮ್ಮ‌ರಾಜಕೀಯ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ, ರಾಷ್ಟ್ರ ಧ್ವಜವನ್ನ ಈ ರೀತಿಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು, ರಾಷ್ರ್ಟಧ್ವಜವನ್ನ ಹಿಡಿದು ನಿಮಗಿಷ್ಟಬಂದಂತೆ ಆಡಿಸುವುದಕ್ಕೆ ಇದೇನು ನಿಮ್ಮ ಪಕ್ಷದ ಧ್ವಜವಾ ಎಂದು ಆಕ್ರೋಶಿತರಾದರು. ಇದಕ್ಕಿಂತ ದೇಶದ್ರೋಹದ ಚಟುವಟಿಕೆ ಮತ್ತೊಂದಿಲ್ಲ ಕಾಂಗ್ರೆಸ್ ನಡೆಗೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. 

ಆಡಳಿತ-ವಿರೋಧ ಪಕ್ಷದ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿ, ತೋಳೇರಿಸಿದ ಪರಿಣಾಮ ಮಾರ್ಷಲ್ ಗಳು ಸ್ಥಳಕ್ಕೆ ಆಗಮಿಸಿ ಸದಸ್ಯರನ್ನು ನಿಯಂತ್ರಿಸಬೇಕಾಯಿತು. ಸದನವನ್ನು ಮುಂದೂಡಿದ ಬಳಿಕವೂ ಗದ್ದಲ ಕೆಲ ಸಮಯದ ಕಾಲ ಹಾಗೆಯೇ ಮುಂದುವರೆದಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ರಾಷ್ರ್ಟಧ್ವಜಕ್ಕೆ ಅದರದೇ ಆದ ಘನತೆ ಇದೇ, ಅದಕ್ಕೆ ಗೌರವ ಕೊಡುವುದನ್ನ ಮೊದಲು ಕಲಿಯಬೇಕು, ರಾಷ್ರ್ಟಧ್ವಜಕ್ಕೆ ಕಾಂಗ್ರೆಸ್ ಸದಸ್ಯರು ಅವಮಾನ ಮಾಡುತ್ತಿದ್ದಾರೆ, ಇದರಿಂದಾಗಿ ರಾಷ್ರ್ಟಧ್ವಜ ಸಂಹಿತೆ (ಫ್ಲಾಗ್‍ ಕೋಡ್‍) ಉಲ್ಲಂಘಿಸಿದಂತಾಗಿದೆ, ಇದು ಸಂವಿಧಾನ ಬಾಹಿರ ಎಂದು ತಮ್ಮ ಆಕ್ರೋಶವನ್ನ ಹೊರಹಾಕಿದರು.

ಪಟ್ಟು ಬಿಡದ ಕಾಂಗ್ರೆಸ್‍ ಸದಸ್ಯರು ಧರಣಿ ಮುಂದುವರೆಸಿದ್ದರಿಂದ ಸಭಾಧ್ಯಕ್ಷ ಕಾಗೇರಿ ಸದನದ ಕಾರ್ಯಕಲಾಪ ವನ್ನ ನಾಳೆಗೆ ಮುಂದೂಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಅವರು ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿದ್ದನ್ನು ವಿರೋಧಿಸಿ ವಿಪಕ್ಷದ ಸದಸ್ಯರು ನಿರ್ಣಯ ಮಂಡಿಸಲು ಮುಂದಾದರು. ಈಶ್ವರಪ್ಪ ಅವರಿಂದ ಸರ್ಕಾರ ರಾಜೀನಾಮೆ ಪಡೆಯಬೇಕು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ ದೇಶದ್ರೋಹದ ಅಡಿ ಪ್ರಕರಣ ದಾಖಲಿಸಬೇಕೆಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ,ಸಚಿವರ ವಿರುದ್ಧ ಆರೋಪ ಮಾಡುತ್ತಿರುವವರು, ಪ್ರಾಥಮಿಕ ಹಂತದ ಮಾಹಿತಿ ಇಲ್ಲದವರು ಪೂರ್ಣ ಮಾಹಿತಿ ಅರಿಯಬೇಕೆಂದು ಹೇಳಿದರು. ಅಷ್ಟೇ ಅಲ್ಲದೇ ಈಶ್ವರಪ್ಪ ಅವರು ದೇಶ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಹೇಳಿಕೆಯ ಪೂರ್ಣ ಪಾಠ ಕೇಳಿದರೆ ತಿಳಿಯುತ್ತದೆ ಎಂದು ಸಮರ್ಥನೆ ನೀಡಿದರು. ಇದೇ ವೇಳೆ ಗೃಹ ಸಚಿವರು ಮಾತನಾಡಿ, ಕಾಂಗ್ರೆಸ್ ಹಿಜಾಬ್ ವಿವಾದದಲ್ಲಿ ತನ್ನ ವೈಫಲ್ಯ ಎದುರಿಸಿದೆ ಆದ್ದರಿಂದ ಹೊಸ ವಿವಾದ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!