ಸುರತ್ಕಲ್‌ ಟೋಲ್ ಗೇಟ್ ಪ್ರತಿಭಟನೆಗೆ ಅಡ್ಡಿ- 6 ಮಂದಿ ಮಂಗಳ ಮುಖಿಯರ ಬಂಧನ

ಮಂಗಳೂರು, ಫೆ.16: ಸುರತ್ಕಲ್‌ನ ಎನ್‌ಐಟಿಕೆ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಆಸಿಫ್ ಆಪತ್ಬಾಂಧವ ಹಾಗೂ ಅವರ ತಂಡ ನಡೆಸುತ್ತಿರುವ ಪ್ರತಿಭಟನೆಗೆ ಅಡ್ಡಿಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ದೂರು ಪ್ರತಿದೂರು ದಾಖಲಾಗಿದೆ.

ಪ್ರತಿಭಟನಾನಿರತರಿಗೆ ಮಂಗಳಮುಖಿಯರು ಅಡ್ಡಿಪಡಿಸಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಆರು ಮಂದಿ ಮಂಗಳ ಮುಖಿಯರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಗಳ ಮುಖಿಯರೂ ಪ್ರತಿಭಟನಾ ನಿರತರ ವಿರುದ್ಧ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಇಂದು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಸುರತ್ಕಲ್ ಟೋಲ್‌ನಲ್ಲಿ ಅನಧಿಕೃತವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಕಳೆದ ಕೆಲವು ದಿನಗಳಿಂದ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ರಾತ್ರಿ 6 ಮಂದಿ ಮಂಗಳ ಮುಖಿಯರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಒಡ್ಡಿರುವುದಾಗಿ ಆಸಿಫ್ ಎಂಬವರು ದೂರು ನೀಡಿದ್ದಾರೆ.

ಮಂಗಳಮುಖಿಯರು ತಮ್ಮ ಜತೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ನಿಂದನೆ, ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಕಾರಣ, ಮಂಡ್ಯ ಪಾಂಡವಪುರದ ವಾಸವಿ ಗೌಡ (32), ದಾವಣಗೆರೆಯ ಲಿಪಿಕಾ (19), ಹಾಸನದ ಹಿಮಾ (24), ಮೈಸೂರಿನ ಆದ್ಯ (22), ಮಾಯಾ (28), ರಾಮನಗರದ ಮೈತ್ರಿ (28) ಎಂಬ ಆರು ಮಂದಿ ಮಂಗಳಮುಖಿಯರನ್ನು ವಶಕ್ಕೆ ಪಡೆಯಲಾಗಿದೆ. ಅವರು ಹೇಳಿರುವ ವಿಳಾಸದಲ್ಲಿ ಗೊಂದಲವಿದ್ದು, ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವು ದು ಎಂದು ಕಮಿಷನರ್ ತಿಳಿಸಿದರು.

ಇನ್ನು ಘಟನೆಗೆ ಸಂಬಂಧಿಸಿ ಮಂಗಳಮುಖಿಯರೂ ಪ್ರತಿದೂರು ನೀಡಿರುವ ಬಗ್ಗೆ ಮಾಹಿತಿ ನೀಡಿ,  ತಾವು ಭಿಕ್ಷಾಟನೆ ಮಾಡುತ್ತಿದ್ದ ಸಂದರ್ಭ ಪ್ರತಿಭಟನೆ ನಡೆಸುವವರು ಹಾಗೂ ಅವರ ಜತೆಗಿದ್ದವರು ತಮ್ಮ ವೀಡಿಯೋ, ಫೋಟೋ ತೆಗೆದು ಛೇಡಿಸಿದ್ದಾರೆ. ರಾತ್ರಿ ಸಮಯ ಹಣ ಕೊಟ್ಟು ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದ್ದಾರೆ ಎಂದು ದೂರಿನಲ್ಲಿ ತಿಳಿಸಿರೋದಾಗಿ ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿರುವುದು ಗೊತ್ತಾದಾಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ಕ್ರಮ ವಹಿಲಾಗಿದೆ ಎಂದು ಅವರು ತಿಳಿಸಿದ್ದಾರೆ.

1 thought on “ಸುರತ್ಕಲ್‌ ಟೋಲ್ ಗೇಟ್ ಪ್ರತಿಭಟನೆಗೆ ಅಡ್ಡಿ- 6 ಮಂದಿ ಮಂಗಳ ಮುಖಿಯರ ಬಂಧನ

Leave a Reply

Your email address will not be published. Required fields are marked *

error: Content is protected !!