ಸುರತ್ಕಲ್ ಟೋಲ್’ನಲ್ಲಿ ಹಗಲು ದರೋಡೆಗೆ ಸಂಸದ ನಳಿನ್ ಸಹಿತ ಶಾಸಕರು ನೇರ ಹೊಣೆ-ಹೋರಾಟ ಸಮಿತಿ
ಸುರತ್ಕಲ್: ಕಳೆದ ಆರು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಅಕ್ರಮವಾಗಿ ಮುಂದುವರಿಯುತ್ತಿರುವ ಸುರತ್ಕಲ್ (ಎನ್ಐಟಿಕೆ) ಟೋಲ್ ಕೇಂದ್ರವನ್ನು ತೆರವುಗೊಳಿಸುವ ಹೆದ್ದಾರಿ ಪ್ರಾಧಿಕಾರದ 2018 ರ ತೀರ್ಮಾನವನ್ನು ತಕ್ಷಣ ಜಾರಿಗೊಳಿಸಲು ಮುಂದಾಗುವಂತೆ ಸಂಸದರು, ಶಾಸಕರು ಸಹಿತ ಸ್ಥಳೀಯ ಜನಪ್ರತಿನಿಧಿಗಳನ್ನು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಎಪ್ರಿಲ್ ಆರಂಭಕ್ಕೆ ಕೊನೆಗೊಳ್ಳುವ ಮೂರು ತಿಂಗಳ ಅವಧಿಯ ಟೋಲ್ ಸಂಗ್ರಹ ಗುತ್ತಿಗೆಯನ್ನು ಯಾವುದೇ ಕಾರಣಕ್ಕೂ ನವೀಕರಿಸಲು ಅವಕಾಶ ನೀಡದಂತೆ ಅದು ಒತ್ತಾಯಿಸಿದೆ.
ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಪತ್ರ ಬರೆಯುವುದು, ಸಾರ್ವಜನಿಕ ಸಾರಿಗೆ ಒಕ್ಕೂಟಗಳ ಸಹಿತ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಶ, ಟೋಲ್ ಗೇಟ್ ಚಲೋ ಪಾದಯಾತ್ರೆಗಳನ್ನು ಹಂತ ಹಂತವಾಗಿ ನಡೆಸಿ ಹೋರಾಟವನ್ನ ತೀವ್ರಗೊಳಿಸುವುದಾಗಿ ಸಮಿತಿ ಎಚ್ಚರಿಸಿದೆ. ಏಳು ವರ್ಷಗಳ ಹಿಂದೆ ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಸುರತ್ಕಲ್ ಟೋಲ್ ಕೇಂದ್ರವು 9 ಕಿ.ಮೀ ಅಂತರದ ಹೆಜಮಾಡಿ ಟೋಲ್ ಕೇಂದ್ರ ಆರಂಭಗೊಂಡ ನಂತರವೂ ಅದೇ ತಾತ್ಕಾಲಿಕ ನೆಲೆಯಲ್ಲಿ ಈಗಲೂ ಮುಂದುವರಿದಿರುವುದು, ವಾಹನ ಸವಾರರ ಸುಲಿಗೆ ನಡೆಸುತ್ತಿರುವುದು ಅತ್ಯಂತ ಖೇದಕರ. ಈ ಹಗಲು ದರೋಡೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಅವಳಿ ಜಿಲ್ಲೆಗಳ ಸಂಸದರು, ಶಾಸಕರುಗಳು ನೇರ ಹೊಣೆ. ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ಕರ್ತವ್ಯ ನಿರ್ವಹಣೆ ಮಾಡಿದರೆ ಸುರತ್ಕಲ್ ಟೋಲ್ ಕೇಂದ್ರ ತೆರವು ಒಂದು ತಿಂಗಳ ಒಳಗಡೆ ಪೂರ್ಣಗೊಳ್ಳಲಿದೆ ಎಂದು ಸಮಿತಿ ಅಪಾದಿಸಿದೆ.
ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾರಂಭಗೊಂಡ ನಂತರ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರ ತೆರವು ಗೊಳಿಸುವಂತೆ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸತತ ಹೋರಾಟಗಳನ್ನು ನಡೆಸಿದೆ. ಪಾದಯಾತ್ರೆ, ಜನಾಗ್ರಹ ಸಭೆಗಳು, ಪ್ರತಿಭಟನಾ ಮೆರವಣಿಗೆ, ಅನಿರ್ಧಿಷ್ಟಾವಧಿ ಧರಣಿಗಳನ್ನು ಹಲವು ಹಂತಗಳಲ್ಲಿ ನಡೆಸಿದೆ. ಇದೆಲ್ಲದರ ಪರಿಣಾಮ ಸುರತ್ಕಲ್ ಟೋಲ್ ಕೇಂದ್ರವನ್ನು ಒಂಬತ್ತು ಕಿ.ಮೀ ಅಂತರದ ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನವನ್ನು ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿದೆ. ರಾಜ್ಯ ಸರಕಾರದಿಂದ ಅದಕ್ಕೆ ಅನುಮೋದನೆಯೂ ದೊರಕಿದೆ.
ಆ ನಂತರವೂ ಕಳೆದ ಮೂರು ವರ್ಷಗಳಿಂದ ಸುರತ್ಕಲ್ ಟೋಲ್ ಕೇಂದ್ರ ತಾತ್ಕಾಲಿಕ ನೆಲೆಯಲ್ಲಿ ನವೀಕರಣ ಗೊಳ್ಳುತ್ತಾ ಬಂದಿರುವುದು ಹಗಲು ದರೋಡೆ ಅಲ್ಲದೆ ಮತ್ತೇನೂ ಅಲ್ಲ. ದಿನವೊಂದಕ್ಕೆ ಸರಿಸುಮಾರು ಹದಿನಾರು ಲಕ್ಷ ರೂಪಾಯಿ ಟೋಲ್ ಸುಂಕ ಸಂಗ್ರಹ ಆಗುವ ಈ ತಾತ್ಕಾಲಿಕ ಟೋಲ್ ಕೇಂದ್ರದ ಗುತ್ತಿಗೆದಾರ ಬಳಗದಲ್ಲಿ ಆಡಳಿತ ಪಕ್ಷದ ಪ್ರಮುಖರೂ, ಅವಳಿ ಜಿಲ್ಲೆಯ ಶಾಸಕ, ಸಂಸದರ ಹಿಂಬಾಲಕರೂ ತುಂಬಿಕೊಂಡಿದ್ದಾರೆ. ಗುತ್ತಿಗೆದಾರರ ಜೇಬಿಗೆ ತಿಂಗಳಿಗೆ ಕೋಟ್ಯಾಂತರ ರೂಪಾಯಿ ಆದಾಯ ತರುವ ಈ ಟೋಲ್ ಕೇಂದ್ರ ಆಡಳಿತ ಪಕ್ಷದ ರಾಜಕಾರಣಿಗಳ ಬೆಂಬಲದಿಂದ ಒಂದು ಮಾಫಿಯಾ ಆಗಿ ಬೆಳೆದಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಗಂಭೀರ ಆರೋಪ ಹೊರಿಸಿದೆ.
ಈ ಕುರಿತು ಇಂದು ಸಭೆ ಸೇರಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ವಿಸ್ತಾರವಾದ ಚರ್ಚೆಯನ್ನು ನಡೆಸಿತು. ಸುರತ್ಕಲ್ ಟೋಲ್ ಕೇಂದ್ರದ ಕುರಿತು ಜನ ಸಾಮಾನ್ಯರಲ್ಲಿ, ಖಾಸಗಿ, ಸಾರ್ವಜನಿಕ ವಾಹನ ಸವಾರರಲ್ಲಿ ಹೆಚ್ಚುತ್ತಿರುವ ಅಸಮಾಧಾನ, ಆಕ್ರೋಶಗಳನ್ನು ಕ್ರೋಢೀಕರಿಸಿ ಹೋರಾಟ ವಾಗಿ ಪರಿವರ್ತಿಸುವ, ಟೋಲ್ ಕೆಂದ್ರ ತೆರವಿಗೆ ನಿರ್ಣಾಯಕ ಒತ್ತಡ ಹೇರುವ ಕುರಿತಾಗಿ ನಿರ್ಧರಿಸಿತು. ಇದರ ಭಾಗವಾಗಿ ತಕ್ಷಣವೇ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ತೆರವುಗೊಳಿಸುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನವನ್ನು ಜಾರಿಗೊಳಿಸಲು ಅವಳಿ ಜಿಲ್ಲೆಗಳ ಸಂಸದರು, ಶಾಸಕರು ಮುಂದಾಗಬೇಕು. ಎಪ್ರಿಲ್ ಮೊದಲ ವಾರದಲ್ಲಿ ಕೊನೆಯಾಗುವ ಟೋಲ್ ಸಂಗ್ರಹ ಗುತ್ತಿಗೆ ಯಾವ ಕಾರಣಕ್ಕೂ ನವೀಕರಣಗೊಳಿಸಲು ಅವಕಾಶ ನೀಡಬಾರದು ಎಂದು ಸಂಸದರು, ಶಾಸಕರ ಸಹಿತ ಜನಪ್ರತಿನಿಧಿಗಳಿಗೆ ಪತ್ರಬರೆಯುವುದು, ಸಾರ್ವಜನಿಕ ಸಾರಿಗೆ ಒಕ್ಕೂಟಗಳ ಸಹಿತ ಸಮಾನ ಮನಸ್ಕ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಶ ನಡೆಸುವುದು, ಸುರತ್ಕಲ್ ಟೋಲ್ ಕೇಂದ್ರ ಚಲೋ ಪಾದಯಾತ್ರೆ ನಡೆಸುವುದು ಹೀಗೆ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸುವುದು ಎಂದು ಸಭೆ ತೀರ್ಮಾನಿಸಿತು.
ಸಬೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿಯ ಸಹ ಸಂಚಾಲಕರಾದ ಉದ್ಯಮಿ ವೈ ರಾಘವೇಂದ್ರ ರಾವ್ ವಹಿಸಿದ್ದರು. ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಯ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಯುವ ಉದ್ಯಮಿ ದಿಲ್ ರಾಜ್ ಆಳ್ವ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಹೆಜಮಾಡಿ ಟೋಲ್ ಗೇಟ್ ವಿರೋಧಿ ಸಮಿತಿಯ ಶೇಖರ ಹೆಜಮಾಡಿ, ನಾಗರಿಕ ಸಮಿತಿ ಕುಳಾಯಿ ಇದರ ಪ್ರಧಾನ ಕಾರ್ಯದರ್ಶಿ ಗಂಗಾಧರ ಭಂಜನ್, ಸಾಮಾಜಿಕ ಕಾರ್ಯಕರ್ತರಾದ ಟಿ ಎನ್ ರಮೇಶ್, ಹರೀಶ್ ಪೇಜಾವರ, ರಾಜೇಶ್ ಶೆಟ್ಟಿ ಪಡ್ರೆ, ರಾಜೇಶ್ ಕುಳಾಯಿ, ರಶೀದ್ ಮುಕ್ಕ, ಯುವ ನ್ಯಾಯವಾದಿ ಜೀಷನ್ ಆಲಿ ಸುರತ್ಕಲ್, ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಅಜ್ಮಲ್ ಅಹ್ಮದ್, ದಲಿತ ಮುಖಂಡ ಸುರೇಶ್ ಬೆಳ್ಳಾಯಾರು ಮತ್ತಿತರರು ಉಪಸ್ಥಿತರಿದ್ದರು.