ಹಿಜಾಬ್ ವಿವಾದದ ಬಿಸಿಯ ನಡುವೆ ಕಾಲೇಜ್ ಆರಂಭ- ಉಡುಪಿಯ 6 ಮಂದಿ ವಿದ್ಯಾರ್ಥಿನಿಯರು ಗೈರು
ಉಡುಪಿ ಫೆ.16: ಹಿಜಾಬ್ ವಿವಾದದ ಬಿಸಿಯ ನಡುವೆಯೇ ರಾಜ್ಯದಾದ್ಯಂತ ಇಂದು ಕಾಲೇಜುಗಳು ಆರಂಭಗೊಂಡಿದೆ. ಈ ನಡುವೆ ವಿವಾದದ ಕೇಂದ್ರ ಬಿಂದುವಾಗಿದ್ದ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ಇಂದು ಗೈರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಡುಪಿಯ ಬಾಲಕಿಯರ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡ ಎಸ್. ಮಾಹಿತಿ ನೀಡಿ, ಹಿಜಾಬ್ ಹೋರಾಟಕ್ಕೆ ಇಳಿದ 6 ಮಂದಿ ವಿದ್ಯಾರ್ಥಿನಿಯರನ್ನು ಹೊರತು ಪಡಿಸಿ, ಉಳಿದ ಎಲ್ಲಾ ಮುಸ್ಲಿಂ ವಿದ್ಯಾರ್ಥಿನಿಯರು ಇತರ ವಿದ್ಯಾರ್ಥಿಗಳೊಂದಿಗೆ ಹಿಜಾಬ್ ರಹಿತವಾಗಿ ಇಂದು ತರಗತಿಗಳಿಗೆ ಹಾಜರಾಗಿದ್ದಾರೆ. ಎಂದಿನಂತೆ ತರಗತಿಗಳು ಶಾಂತಿಯುತವಾಗಿ ಆರಂಭಗೊಂಡಿವೆ ಎಂದು ತಿಳಿಸಿದ್ದಾರೆ. ಇನ್ನು ಮತ್ತೊಂದೆಡೆ ಉಡುಪಿಯ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈಕೋರ್ಟ್ ಅಂತಿಮ ಆದೇಶದವರೆಗೂ ಕಾಯುತ್ತೇವೆ ಎಂದು ಹಿಜಾಬ್ ಧರಿಸಿದ ಕೆಲವು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ಕಾಲೇಜು ಆವರಣದಲ್ಲಿಯೇ ಉಳಿದುಕೊಂಡ ಘಟನೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿಯರು, ನಮಗೆ ಕಾಲೇಜಿನಲ್ಲಿ ಯಾವುದೇ ಒತ್ತಡ ಹಾಕಿಲ್ಲ. ತರಗತಿ ಹೊರತು ಪಡಿಸಿ ಎಲ್ಲಾ ಕಡೆ ಹಿಜಾಬ್ ಧರಿಸಲು ಅನುಮತಿ ನೀಡಿದ್ದಾರೆ. ಪ್ರಾಂಶುಪಾಲರು ತುಂಬಾ ವಿನಯ ದಿಂದಲೇ ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ವಿರುದ್ಧ ನಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೂ ನಮ್ಮ ನಿರ್ಧಾರಕ್ಕೂ ಗೌರವ ನೀಡಿದ್ದಾರೆ. ಹಿಜಾಬ್ ನಮ್ಮ ಹೆಮ್ಮೆ ಹಾಗಾಗಿ ನಾವು ತರಗತಿ ಹಾಜರಾಗುತ್ತಿಲ್ಲ ಹೈಕೋರ್ಟ್ ನ ಅಂತಿಮ ತೀರ್ಪು ಬರುವವರೆಗೂ ಕಾಯುತ್ತೇವೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲ ಭಾಸ್ಕರ ಶೆಟ್ಟಿ ಮಾಹಿತಿ ನೀಡಿ, ಹೈಕೋರ್ಟ್ ನ ಮಧ್ಯಂತರ ಆದೇಶದಂತೆ ಕಾಲೇಜಿನ ತರಗತಿ ಒಳಗಡೆ ಹಿಜಾಬ್ ಧರಿಸುವಂತಿಲ್ಲ ಎಂದು ಮನವರಿಕೆ ಮಾಡಿ ಸೂಚನೆ ನೀಡಿದ್ದೇವೆ. ಬಹುತೇಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಕಾಯುತ್ತೇವೆ ಎಂದಿದ್ದಾರೆ. ಅವರಿಗೆ ಯಾವ ರೀತಿ ತರಗತಿ ನಡೆಸುವುದು ಎಂಬ ಬಗ್ಗೆ ಶಿಕ್ಷಕರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಅವರಿಗೆ ವಿದ್ಯೆ ಮುಖ್ಯ ವಲ್ಲ ಅವರಿಗೆ ಪಿತೂರಿ ಗಲಭೆ ಮುಖ್ಯ ನಷ್ಟ ಶಾಲೆಗೇನಿಲ್ಲ.ಇನ್ನೂಮುಂದೆ ಇರುವ ಬರುವ ಮಕ್ಕಳಿಗೆ ಒಳ್ಳೆಯ ಅಭ್ಯಾಸ ವಾದರೂಅಗಲಿ