ಮಂಗಳೂರು: ಭಾರತೀಯ ಸೇನೆಯ ಸೇವಕನೆಂದು ಹೇಳಿ ಕಂಪೆನಿಯ ಮ್ಯಾನೇಜರ್‌ಗೆ 1 ಲಕ್ಷ ರೂ.‌ ವಂಚನೆ

ಮಂಗಳೂರು, ಫೆ.16: ಭಾರತೀಯ ಸೇನೆಯ ಸೇವಕನೆಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಯೋರ್ವ  ಮಂಗಳೂರಿನ ಕಂಪೆನಿಯೊಂದರ ಮ್ಯಾನೇಜರ್‌ಗೆ ಕ್ಯೂಆರ್ ಕೋಡ್ ಕಳುಹಿಸಿ 96,996 ರೂ.‌ ವಂಚಿಸಿರುವ ಕುರಿತು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ವ್ಯಕ್ತಿಗೆ ಜ.25ರಂದು ಅಪರಿಚಿತ ವ್ಯಕ್ತಿಯೊಬ್ಬ 6900789640 ಮತ್ತು 9735403133 ಸಂಖ್ಯೆಯಿಂದ ಕರೆ ಮಾಡಿ ತಾನು ಭಾರತೀಯ ಸೇನೆಯ ಸೇವಕನೆಂದು ಪರಿಚಯಿಸಿ ಕೊಂಡಿದ್ದಾನೆ. ಮಾತ್ರವಲ್ಲದೆ ಶಾಲೆಯೊಂದರ ಕಾಮಗಾರಿಗಾಗಿ 300 ಚೀಲ ಸಿಮೆಂಟ್ ಬೇಕಾಗಿದೆ ಎಂದು ತಿಳಿಸಿದ್ದ ಎನ್ನಲಾಗಿದೆ.

ಈ ವಿಚಾರವಾಗಿ ಆತ ತನ್ನ ಗುರುತಿನ ಚೀಟಿ ಮತ್ತಿತರ ವಿವರಗಳನ್ನು ಮ್ಯಾನೇಜರ್‌ನ ವಾಟ್ಸಪ್ ಸಂಖ್ಯೆಗೆ ಕಳುಹಿಸಿದ್ದ. ಇದನ್ನು ನಂಬಿದ ಮ್ಯಾನೇಜರ್ 300 ಚೀಲ ಸಿಮೆಂಟ್‌ನ್ನು ವಾಹನದಲ್ಲಿ ತುಂಬಿಸಿ ಕಳುಹಿಸಿ ಕೊಟ್ಟಿದ್ದರು. ಬಳಿಕ ಅಪರಿಚಿತ ವ್ಯಕ್ತಿ ಕೆಲವು ಸಮಯದ ಅನಂತರ ಕರೆ ಮಾಡಿ ಮೊದಲಿಗೆ ಅರ್ಧ ಹಣ, ಅನಂತರ ಪೂರ್ತಿ ಹಣ ಪಾವತಿಸುವುದಾಗಿ ತಿಳಿಸಿ, ಮ್ಯಾನೇಜರ್‌ನ ಪೋನ್ ಪೇ ಸಂಖ್ಯೆಯನ್ನು ವಾಟ್ಸಪ್ ಮೂಲಕ ಪಡೆದುಕೊಂಡ ಎಂದು ಹೇಳಲಾಗಿದೆ.

ಬಳಿಕ ಆತನ ಕ್ಯೂರ್ ಆರ್ ಕೋಡ್‌ನ್ನು ಮ್ಯಾನೇಜರ್‌ನ ಪೋನ್ ಪೇ ನಂಬರ್‌ಗೆ ಕಳುಹಿಸಿದ.ಆತ ತಿಳಿಸಿದಂತೆ ಮ್ಯಾನೇಜರ್ 1 ರೂ.ವನ್ನು ಯುಪಿಐ ಮುಖಾಂತರ ಪಾವತಿಸಿದರು. ಅನಂತರ ಅಪರಿಚಿತ ವ್ಯಕ್ತಿಯು 4 ಕ್ಯೂ ಆರ್ ಕೋಡ್‌ನ್ನು ವಾಟ್ಸಪ್ ಮೂಲಕ ಮ್ಯಾನೇಜರ್‌ಗೆ ಕಳುಹಿಸಿದ. ಮ್ಯಾನೇಜರ್ ಆ ಕ್ಯೂಆರ್ ಕೋಡ್‌ ಗಳನ್ನು ಸ್ಕ್ಯಾನ್ ಮಾಡಿದ ಕೂಡಲೆ ಅಪರಿಚಿತ ವ್ಯಕ್ತಿ ಮ್ಯಾನೇಜರ್‌ನ ಐಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 96,996 ರೂ.ವನ್ನು ತನ್ನ ಖಾತೆಗೆ  ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!