| ಮಣಿಪಾಲ ಫೆ.16(ಉಡುಪಿ ಟೈಮ್ಸ್ ವರದಿ): ಖಾಲಿ ಪೇಪರ್ ಗೆ ಸಹಿ ಹಾಕಿಸಿಕೊಂಡು ಸುಳ್ಳು ಕರಾರನ್ನು ಸೃಷ್ಠಿಸಿ ವಂಚನೆ ಎಸಗಿರುವ ಕುರಿತು ಕರಂಬಳ್ಳಿ ನಿವಾಸಿ ಬೇಬಿ ಪೂಜಾರ್ತಿ ಅವರು ಗೋಪಾಲ ಶೆಟ್ಟಿಗಾರ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ಬೇಬಿ ಪೂಜಾರ್ತಿ ಅವರು, ಶಿವಳ್ಳಿ ಗ್ರಾಮದ ಸರ್ವೆ ನಂ 199/0 ರ 3 ಸೆಂಟ್ಸ್ ಮತ್ತು ಅದರಲ್ಲಿರುವ ಡೀರ್ ನಂಬರ್ 1-112 ರ ಮನೆಯ ದಸ್ತಾವೇಜುವಿನ ಜೆರಾಕ್ಸ್ ಪ್ರತಿಗಳನ್ನು ನೀಡಿ ಆರೋಪಿ ಗೋಪಾಲ ಶೆಟ್ಟಿಗಾರ ನಿಂದ ರೂ. 2,00,000 ಸಾಲ ಪಡೆದುಕೊಂಡಿದ್ದರು. ಸಾಲ ನೀಡುವ ವೇಳೆ ಗೋಪಾಲ ಶೆಟ್ಟಿಗಾರ 2 ಬಾರಿ ಸ್ಟ್ಯಾಂಪ್ ಪೇಪರ್ ಮತ್ತು 10 ಖಾಲಿ ಕಾಗದಗಳಿಗೆ ಸಹಿಯನ್ನು ಪಡೆದುಕೊಂಡಿದ್ದ. ಆ ಬಳಿಕ ಬೇಬಿ ಪೂಜಾರ್ತಿ ಅವರು 2,00,000 ರೂ. ನಗದನ್ನು ಆರೋಪಿಗೆ ಪಾವಸಿದ್ದು ಹಣವು ಬಡ್ಡಿಗೆ ಸಮವಾಗಿದೆ ಎಂದು ಹೇಳಿ ಪುನಃ ಒಂದು ಸ್ಟ್ಯಾಂಪ್ ಪೇಪರ ಮತ್ತು 4-5 ಖಾಲಿ ಪೇಪರಗೆ ಸಹಿ ಪಡೆದು ಸಾಲ ಚುಕ್ತಾ ಮಾಡಲು 4,00,000 ರೂಪಾಯಿ ನೀಡಬೇಕಾಗುತ್ತದೆ ಎಂದು ತಿಳಿಸಿರುತ್ತಾನೆ.
ಬಳಿಕ 2021 ರ ಜೂ.15 ರಂದು ಆರೋಪಿಯು ಬೇಬಿ ಅವರಿಗೆ ಲಾಯರ್ ನೋಟೀಸ್ ಕಳುಹಿಸಿದ್ದು ಅದರಲ್ಲಿ ಬೇಬಿ ಅವರು ಶಿವಳ್ಳಿ ಗ್ರಾಮದ ಸ್ಥಿರಾಸ್ಥಿಯನ್ನು ರೂ. 3,00,000 ಕ್ಕೆ ಮಾರಾಟ ಮಾಡುವ ಬಗ್ಗೆ ಕರಾರೂ ಮಾಡಿಕೊಂಡು, ಬಳಿಕ ಬಂದು ವಿಸ್ತರಣಾ ಕರಾರು ಮಾಡಿಕೊಂಡಿದ್ದಾಗಿದ್ದು, ಮುಂಗಡವಾಗಿ 1,50,000 ರೂ. ಆರೋಪಿಯಿಂದ ಬೇಬಿ ಅವರು ಪಡೆದುಕೊಂಡಿರುವಂತೆ ಹಾಗೂ ಮುಂಗಡವಾಗಿ ಪಡೆದ 1,50,000 ರೂ. ವನ್ನು 2,50,000 ರೂಪಾಯಿ ದಂಡದ ರೂಪದಲ್ಲಿ ಸೇರಿಸಿ ಒಟ್ಟು 4,00,000 ವನ್ನು ಹಿಂದುರುಗಿಸಬೇಕಾಗಿ ಮತ್ತು ಅಲ್ಲಿಯವರೆಗೆ ಸ್ಥಿರಾಸ್ಥಿಯಲ್ಲಿರುವ ಮನೆಗೆ ತಿಂಗಳಿಗೆ ರೂಪಾಯಿ 3,000 ದಂತೆ ಬಾಡಿಗೆ ಪಾವತಿಸಬೇಕು ಮತ್ತು ಸ್ಥಿರಾಸ್ಥಿಯನ್ನು ಆರೋಪಿಯ ಹೆಸರಿಗೆ ನೋಂದಾವಣೆ ಮಾಡಿಕೊಡಬೇಂದು ನಮೂದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಾಗೂ ಆರೋಪಿಯು ಮೋಸ ವಂಚನೆ ಮತ್ತು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸಾಲ ಕೊಡುವ ಸಮಯದಲ್ಲಿ ಸಹಿ ಪಡೆದುಕೊಂಡು ಸ್ಟಾಂಪ್ ಪೇಪರ್ ಮತ್ತು ಖಾಲಿ ಪೇಪರ್ ಗಳಿಗೆ ಸುಳ್ಳು ಕರಾರನ್ನು ಸೃಷ್ಠಿಸಿ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ | |