| ಉಡುಪಿ ಫೆ.15(ಉಡುಪಿ ಟೈಮ್ಸ್ ವರದಿ): ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಇಂದು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಶಾಲಾ- ಕಾಲೇಜು ಆಡಳಿತ ಮಂಡಳಿ ರೂಪಿಸಿರುವ ಸಮವಸ್ತ್ರ ಹಾಗೂ ವಸ್ತ್ರಸಂಹಿತೆಯನ್ನು ವಿದ್ಯಾರ್ಥಿಗಳು ಪಾಲಿಸಬೇಕೆಂದು ಮಧ್ಯಂತರ ಆದೇಶದಲ್ಲಿ ಹೇಳಲಾಗಿದೆ. ಹಾಗಾಗಿ ನಾಳೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಡಳಿತ ಮಂಡಳಿ ನಿಗದಿಪಡಿಸಿರುವ ವಸ್ತ್ರಸಂಹಿತೆಯೊಂದಿಗೆ ಕಾಲೇಜಿಗೆ ಬರಬೇಕು ಎಂದು ಹೇಳಿದ್ದಾರೆ.
ಹಾಗೂ ಹಿಜಾಬ್- ಕೇಸರಿ ಶಾಲು ವಿವಾದ ಕುರಿತಂತೆ ಹೈಕೋರ್ಟ್ ಈಗಾಗಲೇ ನೀಡಿರುವ ಮಧ್ಯಂತರ ಆದೇಶ ಪಾಲಿಸುವುದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಹಲವಾರು ಸಭೆಗಳನ್ನು ನಡೆಸಿ ಕೋರ್ಟ್ ಆದೇಶದ ಕುರಿತಂತೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಯಾವುದೇ ಸಮಸ್ಯೆ ಗಳನ್ನು ನಡೆಯದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಹೊರತಾಗುಯೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಏನು ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಅವರು, ಹೈಕೋರ್ಟ್ ನ ನಿಯಮಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲೇ ಕ್ರಮ ಕೈಗೊಂಡಿದ್ದು, ಕಾಲೇಜು ಸಮಿತಿಯೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದೇವೆ. ನಾಳೆ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ನೋಡಿಕೊಂಡು ಕ್ರಮ ಕೈಗೊಳ್ಳುತ್ತೇನೆ. ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜವಾಬ್ದಾರಿ ಯುತವಾಗಿ ನಡೆದುಕೊಳ್ಳುತ್ತಿದೇವೆ ಎಂದರು.
ಕ್ಯಾಂಪಸ್ ಫ್ರಂಟ್ ಸಂಘಟನೆ ಯನ್ನು ಹಿಜಾಬ್ ವಿವಾದದ ಮಾತುಕತೆಗೆ ಕರೆದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧಾರ್ಮಿಕ ಮುಖಂಡರನ್ನು ಕರೆಸಿ ಮಾತನಾಡಿದ್ದೇವೆ. ಹಂತ ಹಂತವಾಗಿ ಎಲ್ಲರನ್ನೂ ಕರೆಸಿ ಮಾತನಾಡುತ್ತಿದ್ದೇವೆ ಎಂದರು. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮದ್ಯಂತರ ಆದೇಶ ನೀಡಿದರೂ ಹಿಜಾಬ್ ವಿವಾದ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ. ಈ ನಡುವೆ ನಾಳೆ ಕಾಲೇಜುಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು ಹೈಕೋರ್ಟ್ ಆದೇಶ ಪಾಲಿಸುವಂತೆ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಮನವಿ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಂದು ಮತ್ತೆ ವಿವಿಧ ಸಂಘಟನೆಯ ಮುಖಂಡರು, ರಾಜಕೀಯ ನಾಯಕರು ಹಾಗೂ ಪೋಷಕರೊಂದಿಗೆ ಶಾಂತಿ ಸಭೆ ನಡೆಸಲಾಯಿತು.
| |