ಹಿಜಾಬ್ ಬೇಕು, ಶಾಲೆ ಬೇಡ, ಎಕ್ಸಾಂ ಬರೆಯಲ್ಲ- ವಿದ್ಯಾರ್ಥಿನಿಯರ ಹಠ
ಕಾಪು ಫೆ.15 : ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ಮಧ್ಯಂತರ ಆದೇಶದ ಬಳಿಕವೂ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಕಿಡಿ ವ್ಯಾಪಿಸುತ್ತಿದೆ. ಇದೀಗ ಹಿಜಾಬ್ ವಿವಾದ ಕಾಪುವಿನ ಮಲ್ಲಾರು ಗ್ರಾಮದ ಫಕಿರಣಕಟ್ಟೆಯ ಸರಕಾರಿ ಸಂಯುಕ್ತ ಉರ್ದು ಪ್ರೌಢ ಶಾಲೆಯ ಆವರಣ ಪ್ರವೇಶಿಸಿದೆ.
ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಉಡುಪು ಧರಿಸಬಾರದೆಂದು ಹೈಕೋರ್ಟ್ ಆದೇಶದ ಹೊರತಾಗಿ ಯೂ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್ ಧರಿಸಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡದೆ ಸ್ಟಾಫ್ ರೂಂ ನಲ್ಲಿ ಕೂರಿಸಿಸಲಾಗಿತ್ತು. ಇದರಿಂದ ಈ ವಿದ್ಯಾರ್ಥಿ ಗಳ ಪೋಷಕರು ಅಸಮಧಾನ ಗೊಂಡು ಶಾಲೆಯ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದಾಗಿ ಶಾಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸದ್ಯ ಹಿಜಾಬ್ ವಿವಾದ ಕ್ಕೆ ಸಂಬಂಧಿಸಿದಂತೆ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಪ್ರಕರಣದ ಸುಧೀರ್ಘ ವಿಚಾರಣೆ ನಡೆಯುತ್ತಿರುವುದರಿಂದ ಮಧ್ಯಂತರ ಆದೇಶದ ಹೊರತಾಗಿಯೂ ವಿವಾದ ತಣ್ಣಗಾಗದ ಕಾರಣ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಹಿಜಾಬ್ ವಿವಾದ ಯಾವ ರೀತಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಪರಿಣಾಮ ಉಂಟುಮಾಡಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಬೆಂಗಳೂರು: ”ನಮಗೆ ನಮ್ಮ ಇಸ್ಲಾಂ ಧರ್ಮ,ಹಿಜಾಬ್ ಮುಖ್ಯ, ಶಾಲೆಯ ಶಿಕ್ಷಣವಲ್ಲ, ಮನೆಯಲ್ಲಿ ನಮ್ಮ ಅಪ್ಪ-ಅಮ್ಮ ಏನು ಹೇಳುತ್ತಾರೆ ಅವರ ಮಾತುಗಳನ್ನು ಕೇಳುತ್ತೇವೆ”,ಇದು ರಾಜ್ಯದ ಹಲವು ಶಾಲೆಗಳ 9 ಮತ್ತು 10ನೇ ತರಗತಿ ಮುಸ್ಲಿಂ ವಿದ್ಯಾರ್ಥಿನಿಯರ ಉದ್ದಟತನದ ಮಾತು. ನಿನ್ನೆಯ ವಾತಾವರಣವೇ ಇಂದು ಕೂಡ ರಾಜ್ಯದ ಹಲವು ಶಾಲೆಗಳಲ್ಲಿ ಮುಂದುವರಿದಿದೆ.
ಯಾವುದೇ ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ ಮುಸ್ಲಿಂ ವಿದ್ಯಾರ್ಥಿನಿಯರು ಡೋಂಟ್ ಕೇರ್’ ಅನ್ನುತ್ತಿ ದ್ದಾರೆ. ಇಷ್ಟು ದಿನ ಇಲ್ಲದ ಹಿಜಾಬ್ ಸಮಸ್ಯೆ ಈಗ ಏಕೆ, ಹಿಜಾಬ್ ಧರಿಸದೆ ನಾವು ಮನೆಯಿಂದ ಹೊರಗೆ ಹೋಗುವಂತಿಲ್ಲ. ಅಂಥದ್ದರಲ್ಲಿ ಶಾಲೆಗೆ ಹೋದ ತಕ್ಷಣ ಎಲ್ಲಾ ತೆಗೆದು ಇಡಿ ಎಂದರೆ ನಮ್ಮ ಧರ್ಮದಲ್ಲಿ ಕಷ್ಟ ವಾಗುತ್ತದೆ. ಇಷ್ಟು ದಿನ ಯಾರೂ ಏನು ಹೇಳಿಲ್ಲ, ನಮ್ಮ ತಾತ-ಮುತ್ತಾತಂದಿರ ಕಾಲದಿಂದ ನಾವು ಹುಟ್ಟಿದಾಗಿ ನಿಂದ ಹಿಜಾಬ್ ಧರಿಸಿಕೊಂಡು ಬರುತ್ತೇವೆ. ಈಗ ಏಕೆ ವಿರೋಧ ಮಾಡುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಪರೀಕ್ಷೆ ಬಹಿಷ್ಕರಿಸಿ ಹೊರಬಂದ ವಿದ್ಯಾರ್ಥಿನಿಯರ ವಾದ.
ಇಂದು ಕೂಡ ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ವಾಪಸ್ ಬಂದಿದ್ದಾರೆ. ಕೊಪ್ಪಳದ ಮೌಲಾನಾ ಆಜಾದ್ ಶಾಲೆಗೆ, ಕೊಡಗಿನ ನೆಲ್ಲಿಹುದಿಗೇರಿ ಸರ್ಕಾರಿ ಶಾಲೆಯ 20 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್ ಧರಿಸಿ ಬಂದು ತರಗತಿಯೊಳಗೆ ಬಿಡದ ಕಾರಣ ಮನೆಗೆ ವಾಪಸ್ ಆಗಿದ್ದಾರೆ.ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಎಷ್ಟೇ ಮನವೊಲಿಸಿದರೂ ವಿದ್ಯಾರ್ಥಿನಿಯರು ಕೇಳದೆ ಮನೆಗೆ ವಾಪಸ್ಸಾಗಿದ್ದಾರೆ.
ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಎಕ್ಸಾಂ ಬರೆಯದಿದ್ದರೂ ಪರವಾಗಿಲ್ಲ, ನಾವು ಹಿಜಾಬ್ ತೆಗೆಯುವುದೇ ಇಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಕಲಬುರಗಿಯ ಉರ್ದು ಶಾಲೆಯಲ್ಲಿ ಹಿಜಾಬ್ ಧರಿಸದೆ ಒಳಗೆ ಬಿಡುವುದಿಲ್ಲ ಎಂದು ಬಹುತೇಕ ಮಕ್ಕಳು ಶಾಲೆಗೆ ಇಂದು ಬಂದೇ ಇಲ್ಲ, ಗೈರಾಗಿದ್ದಾರೆ.
ಮನೆಯಲ್ಲಿ ಪೋಷಕರಲ್ಲಿ ಏನು ಮಾಡುವುದೆಂದು ಕೇಳಿಬಂದೆವು. ಆಗ ಪೋಷಕರು ನೋಡು ಶಾಲೆಯಲ್ಲಿ ಏನು ಹೇಳುತ್ತಾರೋ, ಒಳಗೆ ಬಿಡುತ್ತಾರೋ ನೋಡು, ಬಿಡದಿದ್ದರೆ ವಾಪಾಸ್ ಬಾ ಎಂದಿದ್ದಾರೆ. ನಮಗೆ ಹಿಜಾಬ್ ಬೇಕು. ನೋಡೋಣ ಕೋರ್ಟ್ ಏನು ಹೇಳುತ್ತಾ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.
ಕಲಬುರಗಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ತಾಯಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ ಇನ್ನೆರಡು ಮೂರು ದಿನಗಳಲ್ಲಿ ಕೋರ್ಟ್ ತೀರ್ಪು ಬರಬಹುದಲ್ಲವೇ ಅಲ್ಲಿಯವರೆಗೆ ಹಿಜಾಬ್ ಧರಿಸಲು ಬಿಡದಿದ್ದರೆ ಮಕ್ಕಳು ಮನೆಯಲ್ಲಿಯೇ ಇರಲಿ, ನೋಡೋಣ ಆಮೇಲೆ ಏನಾಗುತ್ತೋ, ನಮ್ಮ ಮಕ್ಕಳಿಗೆ ಶಾಲೆ, ವಿದ್ಯೆ ಬೇಕು ನಿಜ. ಆದರೆ ನಮ್ಮ ಧರ್ಮದಲ್ಲಿರುವ ಹಿಜಾಬ್ ಬೇಕಲ್ಲವೇ ಎಂದರು.
ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ತರಗತಿಗಳು ಸರಿಯಾಗಿ ನಡೆದಿಲ್ಲ. ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅರ್ಥವಾಗಿದೆಯೋ ಗೊತ್ತಿಲ್ಲ. ಈಗ ಮತ್ತೆ ಸಹಜವಾಗಿ ಭೌತಿಕ ತರಗತಿಗಳು ಆರಂಭವಾಗುತ್ತಿರುವುದರ ಮಧ್ಯೆ ಹಿಜಾಬ್ ವಿವಾದ ಶಿಕ್ಷಣ ಇಲಾಖೆಗೆ, ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ನಾಳೆ ಪಿಯುಸಿ ಮತ್ತು ಪದವಿ ಕಾಲೇಜುಗಳು ಆರಂಭವಾಗುತ್ತಿದ್ದು, ಇನ್ನು ಕಾಲೇಜಿಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರು ಏನು ಹೇಳುತ್ತಾರೋ, ಏನು ಮಾಡುತ್ತಾರೋ ಎಂಬ ಆತಂಕ ಉಂಟಾಗಿದೆ.