ಉಡುಪಿ: ಬೇರಿಂಗ್ ಕಂಪೆನಿಗೆ ವಂಚಿಸಿದ ಸೇಲ್ಸ್ ಎಕ್ಸಿಕ್ಯುಟಿವ್
ಉಡುಪಿ ಫೆ.15 (ಉಡುಪಿ ಟೈಮ್ಸ್ ವರದಿ): ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ಬೇರಿಂಗ್ ಕಂಪೆನಿಯೊಂದರ ಪಾಲುದಾರರಾದ ಲಕ್ಷ್ಮಣ ಬಿ ಅಮಿನ್ ರವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿ ಕಂಪೆನಿಯ ಕಚೇರಿಯ ಸೇಲ್ಸ್ ಎಕ್ಸಿಕ್ಯುಟಿವ್ ಆಗಿದ್ದ ಚೇತನ್ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಬೇರಿಂಗ್ ಕಂಪೆನಿಯ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಕಚೇರಿಗೆ 2008 ರಲ್ಲಿ ಸೇಲ್ಸ್ ಮೆನ್ ಆಗಿ ಕೆಲಸಕ್ಕೆ ಸೇರಿದ್ದ ಚೇತನ್, ನಂತರ ಸೇಲ್ಸ್ ಎಕ್ಸಿಕ್ಯುಟೀವ್ ಆಗಿದ್ದ, ಈತ 2021 ರ ಜೂ.14 ರಿಂದ ಡಿ.18 ರ ಅವಧಿಯಲ್ಲಿ ಸಂಸ್ಥೆಯ ಗ್ರಾಹಕರಿಂದ ಒಟ್ಟು ರೂಪಾಯಿ 8,57,336 ನಗದನ್ನು ಸಂಗ್ರಹಿಸಿದ್ದ. ಆದರೆ ಈ ಮೊತ್ತವನ್ನು ಸಂಸ್ಥೆಗೆ ಪಾವತಿ ಮಾಡದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಮಾಲೀಕರಿಗೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.