ಭಾಷೆ ನಾಶವಾಗುವುದೆಂದರೆ ಒಂದು ಸಂಸ್ಕೃತಿ ನಾಶವಾದಂತೆ- ಡಾ.ಎ.ಪಿ.ಭಟ್
ಉದ್ಯಾವರ ಫೆ.14: ಒಂದು ಭಾಷೆ ನಾಶವಾಗುವುದೆಂದರೆ ಅದು ಭಾಷೆಗಷ್ಟೇ ಸೀಮಿತವಾಗಿರೋದಿಲ್ಲ. ಅದು ಒಂದು ಸಂಸ್ಕೃತಿ ನಾಶವಾದಂತೆ. ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯ. ಹಾಗಾಗಿ ಕನ್ನಡ ಮಾಧ್ಯಮವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ಎ.ಪಿ.ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ 2022-23 ಸಾಲಿನ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲಭಾಷಾ ಮಾಧ್ಯಮಗಳ ಕಾರಣದಿಂದ ಕನ್ನಡ ಮಾಧ್ಯಮ ಶಾಲೆಗಳು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಕನ್ನಡ ಮಾಧ್ಯಮ ಎಂಬ ಕೀಳರಿಮೆ ಯಾರಿಗೂ ಬೇಡ. ಕನ್ನಡ ಮಾಧ್ಯಮವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಸರಕಾರದ ಎದುರು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಉಳಿಸಿ ಎಂದು ಎಷ್ಟು ಕೂಗಿದರೂ ಪ್ರಯೋಜನ ವಾಗಿಲ್ಲ. 350 ವಿದ್ಯಾರ್ಥಿಳು ಇರುವ ಶಾಲೆಯಲ್ಲಿ ಒಬ್ಬರು ಖಾಯಂ ಶಿಕ್ಷಕರು ಇದ್ದಾರೆ ಎಂದರೆ ಇದು ಸರಕಾರಕ್ಕೆ ಅವಮಾನ. ಗೌರವ ಶಿಕ್ಷಕರನ್ನು ನೇಮಕ ಮಾಡಿ ಈ ಶಾಲೆಯನ್ನು ಈವರೆಗೆ ಅದ್ಭುತವಾಗಿ ಕಟ್ಟಿದ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಹೆತ್ತವರು ಅಭಿನಂದನಾರ್ಹರು ಎಂದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರು ಹವಿಸಂ ಗೌರವಾಧ್ಯಕ್ಷ ಗಣಪತಿ ಕಾರಂತರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗತ ವರ್ಷದ ಅಧ್ಯಕ್ಷ ಕೆ. ಮುರಳೀಕೃಷ್ಣ ಭಟ್, ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಹವೀಸಂ ಗೆ ಸೇರ್ಪಡೆ ಯಾದ ಹಳೇ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಸುರೇಶ್ ಶೆಣೈ, ಶಾಲಾ ಮುಖ್ಯೋಪಾಧ್ಯಾಯರು, ಹವಿಸಂನ ಕೋಶಾಧಿಕಾರಿ ಹೇಮಲತಾ, ಹಿಂದೂ ಶಾಲಾ ಹವಿಸಂನ ಅಧ್ಯಕ್ಷ ಸುನಿಲ್ ಸಾಲ್ಯಾನ್ ಕಡೆಕಾರ್, ಉದ್ಯಾವರ ನಾಗೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರವಿಕಿರಣ್, ಶಿಕ್ಷಕ ವಿಕ್ರಮ್ ಆಚಾರ್ಯ ಮತ್ತು ಸ್ವಾತಿ ಉಪಸ್ಥಿತರಿದ್ದರು.