ಹಿಜಾಬ್ ಹೋರಾಟಗಾರರಿಗೆ ಉತ್ತರ ಪ್ರದೇಶ ಚುನಾವಣೆಯ ಚಿಂತೆಯೇಕೆ?- ಶಾಸಕ ರಘುಪತಿ ಭಟ್ ಟ್ವೀಟ್
ಉಡುಪಿ ಫೆ.14 (ಉಡುಪಿ ಟೈಮ್ಸ್ ವರದಿ): ಹಿಜಾಬ್ ಪರವಾಗಿ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿನಿಯರ ಹಿಂದಿರುವ ರಾಜಕೀಯ ನಿಲುವು ಬಹಿರಂಗವಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು “ಉತ್ತರ ಪ್ರದೇಶದ ಚುನಾವಣೆ ಮುಗಿಯುವವರೆಗೆ ಹಿಜಾಬ್ ಪ್ರಕರಣದ ಹೈಕೋರ್ಟ್ ವಿಚಾರಣೆ ಮುಂದೂಡಬೇಕು” ಎಂಬ ಈ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಲಾಗಿದೆ.
ಮಧ್ಯಂತರ ಆದೇಶದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದಿದ್ದ ವಿದ್ಯಾರ್ಥಿನಿಯರು ಮಧ್ಯಂತರ ಆದೇಶದ ಬಳಿಕ ಉತ್ತರ ಪ್ರದೇಶದ ಚುನಾವಣೆಯ ಕಾರಣ ನೀಡಿ ವಿಚಾರಣೆಯನ್ನೇ ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನಿಯರನ್ನು ಬಳಸಿಕೊಂಡು ರಾಜಕೀಯ ಆಟ ಆಡುತ್ತಿರುವವರನ್ನು ಜನರು ಎಂದಿಗೂ ಕ್ಷಮಿಸಲಾರರು ಎಂದು ಹೇಳಿದ್ದಾರೆ.
ಇನ್ನು ಹಿಜಾಬ್ ಹೋರಾಟಗಾರರಿಗೆ ಚುನಾವಣೆಯ ಚಿಂತೆಯೇಕೆ? ಎಂದಿರುವ ಅವರು, ಇನ್ನೂ ಮತದಾನದ ಹಕ್ಕು ಪಡೆಯದ ವಿದ್ಯಾರ್ಥಿನಿಯರು ದೂರದ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆಂದರೆ ಇವರ ಹಿಂದಿರುವ ಕಾಣದ ‘ಕೈ’ಗಳು ಯಾವುವು? ಹಿಜಾಬ್ ಬೇಕೆಂದವರು ಈಗ ಹಿಜಾಬ್ ವಿಚಾರಣೆಯನ್ನೇ ಮುಂದೂಡಿ ಎಂದು ಅರ್ಜಿ ಹಾಕಿರುವುದೇಕೆ? ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.